ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅವರನ್ನು ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ ಸರ್ವಿಸಸ್ ( ಇಡಿಸಿಎಸ್) ನಿರ್ದೇಶಕರಾಗಿ ನೇಮಕಗೊಳಿಸಿ ವರ್ಗಾವಣೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಡಾ. ರಾಜೇಂದ್ರ ಕೆ.ವಿ ಅವರನ್ನು ನೇಮಕಗೊಳಿಸಲಾಗಿದೆ. ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ರಾಜೇಂದ್ರ ಕೆ.ವಿ ಅವರನ್ನು ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ. ಸಿಂಧೂ ರೂಪೇಶ್ ಅವರ ವರ್ಗಾವಣೆ ಬಗ್ಗೆ ಈ ಹಿಂದೆಯೂ ಸುದ್ದಿಯಾಗಿತ್ತು.
ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುವ ಸಂದರ್ಭದಲ್ಲಿ ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳದೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಸಾರ್ವಜನಿಕರು ಕಾನೂನು ಉಲ್ಲಂಘಿಸಿ ಜಾನುವಾರು ಸಾಗಣಿಕೆ ಮಾಡುವ ವಾಹನ ಅಥವಾ ಜನರ ಮೇಲೆ ಹಲ್ಲೆ ನಡೆಸಿದ್ದಲ್ಲಿ ಕಾನೂನು ರೀತಿ ಕ್ರಮಕೈಗೊಳ್ಳುವ ಬಗ್ಗೆ ನೀಡಿದ ಹೇಳಿಕೆ, ಸಂಘ ಪರಿವಾರದವರ ಆಕ್ರೋಶಕ್ಕೆ ಗುರಿಯಾಗಿತ್ತು.
ರಾಮಸೇನೆಯ ವಾಟ್ಸ್ ಆ್ಯಪ್ ಗ್ರೂಪ್ವೊಂದರಲ್ಲಿ ಜಿಲ್ಲಾಧಿಕಾರಿಗೆ ಜೀವ ಬೆದರಿಕೆಯೊಡ್ಡುವ ಬರಹಗಳನ್ನು ಹಾಕಲಾಗಿತ್ತು. ಇದರ ನಡುವೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯ ವರ್ಗಾವಣೆ ನಡೆದಿದೆ.