ಬೆಂಗಳೂರು/ಮಂಗಳೂರು: ಚಂಡಮಾರುತ ಅಪ್ಪಳಿಸುವ ಭೀತಿ ಇರುವುದರಿಂದ ಅರಬ್ಬೀ ಸಮುದ್ರಕ್ಕೆ ತೆರಳಿರುವ ಮೀನುಗಾರರು ತಕ್ಷಣ ದಡಕ್ಕೆ ಬರುವಂತೆ ಭಾರತೀಯ ಕರಾವಳಿ ತಟರಕ್ಷಣಾ ಪಡೆ ಎಚ್ಚರಿಕೆ ನೀಡಿದೆ.
ಅರಬ್ಬೀ ಸಮುದ್ರದಲ್ಲಿ ಭಾರಿ ಪ್ರಮಾಣದ ಚಂಡಮಾರುತ ಕಾಣಿಸಿಕೊಳ್ಳುವ ಭೀತಿ ಇರುವ ಮುನ್ಸೂಚನೆ ಇದ್ದು, ಭಾರತೀಯ ಕರಾವಳಿ ತಟರಕ್ಷಣಾ ಪಡೆಯು ಹಡಗಿನ ಮೂಲಕ ಕರಾವಳಿ ಉದ್ದಕ್ಕೂ ತೆರಳಿ ಮೀನುಗಾರರಿಗೆ ದಡ ಸೇರುವಂತೆ ಸೂಚನೆ ನೀಡುತ್ತಿದೆ. ಮೈಕ್ ಮೂಲಕ ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಮೀನುಗಾರರು ತಕ್ಷಣ ದಡ ಸೇರುವಂತೆ ಸೂಚನೆ ನೀಡಲಾಗುತ್ತಿದೆ.
ಅರಬ್ಬೀ ಸಮುದ್ರದಲ್ಲಿ ಏಳುವ ತೌಕ್ತೆ ಎಂಬ ಹೆಸರಿನ ಚಂಡಮಾರುತವು ಮೇ 16ರಂದು ಕರ್ನಾಟಕ, ಕೇರಳದ ಕರಾವಳಿಗೆ ಅಪ್ಪಳಿಸಲಿದೆ. ಈ ಹಿನ್ನೆಲೆಯಲ್ಲಿ ನಾಳೆಯಿಂದಲೇ ಚಂಡಮಾರುತದ ಪರಿಣಾಮಗಳು ಕಂಡು ಬರಲಿವೆ. ಆದ್ದರಿಂದ ಭಾರತೀಯ ಕರಾವಳಿ ತಟರಕ್ಷಣಾ ಪಡೆಯು ಮೀನುಗಾರಿಕೆಗೆ ತೆರಳಿರುವ ಮೀನುಗಾರರು ತಕ್ಷಣ ದಡ ಸೇರುವಂತೆ ಸೂಚಿಸಲಾಗ್ತಿದೆ.
ಹವಾಮಾನ ಇಲಾಖೆಯು ರೆಡ್ ಅಲರ್ಟ್ ನೀಡಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ಮೀನುಗಾರಿಕಾ ದೋಣಿಗಳು ಮೀನುಗಾರಿಕೆಗೆ ಇಳಿಯದಂತೆ ಕರ್ನಾಟಕ ಕೋಸ್ಟ್ ಗಾರ್ಡ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಗಸ್ತು ತಿರುಗುತ್ತಿರುವ ಐಸಿಜಿ ಹಡಗುಗಳು ಮತ್ತು ಸಿಜಿ ಡಾರ್ನಿಯರ್ ವಿಮಾನಗಳು ಸಂಜ್ಞೆಯ ಮೂಲಕ ಸಮುದ್ರದಲ್ಲಿರುವ ಮೀನುಗಾರರಿಗೆ ಎಚ್ಚರಿಕೆ ನೀಡುತ್ತಿದ್ದು, ಹತ್ತಿರದ ತೀರಕ್ಕೆ ಮರಳಲು ತಿಳಿಸಿದ್ದಾರೆ.