ಮಂಗಳೂರು: ಉಡುಗೊರೆ ಕಳುಹಿಸಿಕೊಡಲು ಹಣದ ಬೇಡಿಕೆಯಿರಿಸಿ ಅಪರಿಚಿತ ವ್ಯಕ್ತಿಯೋರ್ವ ಮಂಗಳೂರಿನ ಮಹಿಳೆಯೋರ್ವರಿಗೆ 13.35 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಜೂಲಿಯಾ ಸ್ಯಾಂಟೋಸ್ ವಂಚನೆಗೊಳಗಾದ ಮಹಿಳೆಯಾಗಿದ್ದು, ನಗರದ ಪಾಂಡೇಶ್ವರದಲ್ಲಿರುವ ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್ ಅಪರಾಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜೂಲಿಯಾ ಸ್ಯಾಂಟೋಸ್ ಅವರಿಗೆ ಡಾ.ಜಿಮ್ ಕಿಯಾ ಎಂಬ ಹೆಸರಿನಲ್ಲಿ ಫೇಸ್ಬುಕ್ ಖಾತೆ ಹೊಂದಿದ ವ್ಯಕ್ತಿ ಸ್ನೇಹಿತನಾಗಿದ್ದು, ಮೊಬೈಲ್ ನಂಬರ್ ಪಡೆದು ಜೂಲಿಯಾ ಸ್ಯಾಂಟೋಸ್ ಮಗಳ ಹುಟ್ಟುಹಬ್ಬಕ್ಕೆ ಉಡುಗೊರೆ ಕಳುಹಿಸುವುದಾಗಿ ತಿಳಿಸಿದ್ದನು.
ಇದನ್ನೂ ಓದಿ: ಲಾಕರ್ನಲ್ಲಿದ್ದ 4.50 ಲಕ್ಷ ರೂ. ಕಳವು: ರೆಸ್ಟೋರೆಂಟ್ ಸಿಬ್ಬಂದಿ ಮೇಲೆಯೇ ಮಾಲೀಕನ ಅನುಮಾನ..!
ಇದಾದ ಬಳಿಕ ಕೆಲವು ಅಪರಿಚಿತರು, ಜೂಲಿಯಾ ಸ್ಯಾಂಟೋಸ್ ಅವರಿಗೆ ಕಸ್ಟಂ ಅಧಿಕಾರಿಗಳೆಂದು ನಂಬಿಸಿ, ಉಡುಗೊರೆಯನ್ನು ಬಿಡಿಸಿಕೊಳ್ಳಲು ಹಣದ ಬೇಡಿಕೆ ಇಟ್ಟಿದ್ದಾರೆ. ಈ ಮೂಲಕ ಬೇರೆ ಬೇರೆ ಖಾತೆಗಳ ಮೂಲಕ 13.35 ಲಕ್ಷ ರೂಪಾಯಿಯನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ನಗರದ ಪಾಂಡೇಶ್ವರದಲ್ಲಿರುವ ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.