ಮಂಗಳೂರು: ನಗರದಲ್ಲಿ ಶನಿವಾರದಿಂದ ರಾತ್ರಿ ಹೊತ್ತು ಜಾರಿಯಲ್ಲಿದ್ದ ಕರ್ಫ್ಯೂ ಇಂದಿನಿಂದ ತೆರವುಗೊಳ್ಳಲಿದೆ. ಆದ್ರೆ 144 ಸೆಕ್ಷನ್ ಮುಂದುವರಿಯಲಿದೆ. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.
144 ಸೆಕ್ಷನ್ ಜಾರಿಯಲ್ಲಿರುವುದರಿಂದ ಯಾರೂ ಅಕ್ರಮ ಕೂಟ, ನಾಲ್ವರಿಗಿಂತ ಹೆಚ್ಚು ಜನ ಸೇರುವುದು, ಪ್ರತಿಭಟನೆ, ಗಲಾಟೆ ನಡೆಸುವಂತಿಲ್ಲ. ಅಲ್ಲದೆ ಶಸ್ತ್ರಾಸ್ತ್ರ, ಕತ್ತಿ, ದೊಣ್ಣೆ, ಬಂದೂಕು ಸೇರಿದಂತೆ ಯಾವುದೇ ಮಾರಕಾಯುಧ ಕೊಂಡೊಯ್ಯುವಂತಿಲ್ಲ. ಪಟಾಕಿ ಸಿಡಿಸುವುದು, ಮೆರವಣಿಗೆ, ವಿಜಯೋತ್ಸವ, ರಸ್ತೆತಡೆ, ಮುಷ್ಕರ ನಡೆಸುವುದನ್ನೂ ನಿಷೇಧಿಸಲಾಗಿದೆ. ಜೊತೆಗೆ ಪ್ರತಿಕೃತಿ ಪ್ರದರ್ಶಿಸುವುದು, ಸಾರ್ವಜನಿಕ ಸುವ್ಯಸ್ಥೆಗೆ ಭಂಗ ತರುವಂತಹ, ಅಪರಾಧಕ್ಕೆ ಪ್ರಚೋದನೆ ನೀಡುವ ಘೋಷಣೆ, ಭಿತ್ತಿಪತ್ರಗಳನ್ನು ಅಂಟಿಸುವುದಕ್ಕೂ ಬ್ರೇಕ್ ಹಾಕಲಾಗಿದೆ.
ಕರ್ಫ್ಯೂ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಶಾಲೆಗೆ ರಜೆ ಇದ್ದು, ಇಂದು ಮಂಗಳೂರು ಮತ್ತೆ ಸಹಜ ಸ್ಥಿತಿಯತ್ತ ತಿರುಗಿರುವುದರಿಂದ ಮಕ್ಕಳು ಯಥಾ ಪ್ರಕಾರ ಶಾಲೆಗೆ ತೆರಳಿದರು. ಅಲ್ಲದೆ ಕರ್ಫ್ಯೂ ತೆರವಾದ ಹಿನ್ನೆಲೆಯಲ್ಲಿ ಕಚೇರಿಗಳು ಮಾಮೂಲಿನಂತೆ ಕಾರ್ಯಾಚರಿಸುವುದರಿಂದ ಮೂರು ದಿನಗಳಿಂದ ಕೆಲಸಕ್ಕೆ ತೆರಳದವರು ಇಂದು ಮತ್ತೆ ತಮ್ಮ ದಿನಚರಿ ಆರಂಭಿಸಿದರು. ಒಟ್ಟಿನಲ್ಲಿ ಕರ್ಫ್ಯೂನಿಂದ ಮೂರು ದಿನಗಳಿಂದ ಬೇಸತ್ತಿದ್ದ ಜನತೆ ಸದ್ಯ ಇಂದಿನಿಂದ ನಿಟ್ಟುಸಿರು ಬಿಡುವಂತಾಗಿದೆ.