ಮಂಗಳೂರು: ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿಕೊಂಡು ಒಳ್ಳೆಯ ಲಾಭಾಂಶವನ್ನು ಪಡೆಯಬಹುದು ಎಂದು ಹಲವಾರು ಮಂದಿ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಹಣವನ್ನು ವಂಚಕನೊಬ್ಬರು ಹೂಡಿಕೆ ಮಾಡಿಸಿಕೊಂಡಿದ್ದರು. ನಂತರ ಅವರಿಗೆ ವಂಚನೆ ಮಾಡಿದ್ದರಿಂದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಮಲಪುರಂನ ಹಂಝಾ ಸಿ ಟಿ ಬಂಧಿತ ಆರೋಪಿ. ಈತ ಕ್ರಿಪ್ಟೋ ಕರೆನ್ಸಿ ವ್ಯವಹಾರದಲ್ಲಿ ಕೋಟ್ಯಾಂತರ ರೂಪಾಯಿ ಹಣ ಲಾಭ ಗಳಿಸಬಹುದು ಎಂದು ಹಲವಾರು ಮಂದಿಯಿಂದ ಹಣವನ್ನು ಹೂಡಿಕೆ ಮಾಡಿಸಿಕೊಂಡಿದ್ದರು. ನಂತರ ತಿಂಗಳಿಗೆ 25 % ಲಾಭಾಂಶವನ್ನು ನೀಡುವುದಾಗಿ ಮಂಗಳೂರು ನಗರದ ಕಣ್ಣೂರು ವಾರ್ಡ್ ನಿವಾಸಿಯಿಂದ ಹಾಗೂ ಇತರ ನಾಗರಿಕರಿಂದ ಕೋಟ್ಯಾಂತರ ರೂಪಾಯಿಯನ್ನು ಬ್ಯಾಂಕ್ ಖಾತೆಗಳಿಗೆ ಹೂಡಿಕೆ ಮಾಡಿಸಿಕೊಂಡಿದ್ದರು.
ಆದರೆ, ಲಾಭಾಂಶವನ್ನು ನೀಡದೇ ವಂಚನೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಆರೋಪಿಯಾದ ಹಂಝಾನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿರುತ್ತಾನೆ. ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿಯವರಾದ ಪಿ ಎ ಹೆಗ್ಡೆ, ಪೊಲೀಸ್ ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್‌ಐ ರಾಜೇಂದ್ರ ಹಾಗೂ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.
ಪೇರು ಮಾರುಟ್ಟೆಯಲ್ಲಿ ವಂಚನೆ-ಆರೋಪಿ ಬಂಧನ : ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿಕೊಂಡು ಒಳ್ಳೆಯ ಲಾಭಾಂಶವನ್ನು ಪಡೆಯಬಹುದು ಎಂದು ಮಂಗಳೂರು ಶಕ್ತಿನಗರ ಪರಿಸರದ ನಿವಾಸಿಯಿಂದ ಕೋಟ್ಯಾಂತರ ರೂಪಾಯಿ ಹಣವನ್ನು ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ ಪ್ರಕರಣದಲ್ಲಿ ಆರೋಪಿಯನ್ನು ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕೇರಳ ರಾಜ್ಯದ ಕ್ಯಾಲಿಕಟ್ನ ಜಿಜೊ ಜಾನ್ ಪಿ. ಕೆ ಬಂಧಿತ ಆರೋಪಿ. ಆರೋಪಿ ಜಿಜೊ ಜಾನ್ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ವ್ಯವಹಾರದಲ್ಲಿ ಕೋಟ್ಯಾಂತರ ರೂಪಾಯಿ ಹಣ ಲಾಭ ಗಳಿಸಬಹುದು ಎಂದು ಕೆಲವರಿಗೆ ತಿಳಿಸಿದ್ದ. ಈತ ಹಣವನ್ನು ಹೂಡಿಕೆ ಮಾಡಿಕೊಂಡು ನಂತರ ತಿಂಗಳಿಗೆ 15% ಲಾಭಾಂಶವನ್ನು ನೀಡುವುದಾಗಿ ಮಂಗಳೂರು ಶಕ್ತಿನಗರ ಪರಿಸರದ ನಿವಾಸಿಯಿಂದ ಸುಮಾರು 1 ಕೋಟಿ ರೂಪಾಯಿಯನ್ನು ಬ್ಯಾಂಕ್ ಖಾತೆಗಳಿಗೆ ಹೂಡಿಕೆ ಮಾಡಿಸಿಕೊಂಡಿದ್ದನು. ಆದರೆ ಲಾಭಾಂಶವನ್ನು ನೀಡದೇ ಪಡೆದ ಹಣವನ್ನು ವಾಪಸು ನೀಡದೇ ವಂಚನೆ ಮಾಡಿದ ಪ್ರಕರಣದಲ್ಲಿ ಈತನನ್ನು ಭಾನುವಾರ ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಪಿ ಎ ಹೆಗ್ಡೆ, ಸೆನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ಜಿ.ಜೆ, ಪಿಎಸ್‌ಐ ಲೀಲಾವತಿ ಹಾಗೂ ಸೆನ್ ಕ್ರೈಂ ಪೊಲೀಸ್ ಠಾಣೆಯ ಸಿಬ್ಬಂದಿ ಪಾಲ್ಗೊಂಡಿದ್ದರು.
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಆತ್ಮಹತ್ಯೆ : ಇನ್ನೊಂದೆಡೆ ಇಲ್ಲಿನ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಚ್ಚಿಲಕೋಡಿ ಎಂಬಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವ ಪತ್ನಿಯ ಸಂಬಂಧಿಕರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವಿಟ್ಲ ಕನ್ಯಾನ ನಿವಾಸಿ ಬಾಬು ಶೆಟ್ಟಿಗಾರ್ ಎಂಬವರ ಪುತ್ರ ಹರೀಶ್ (33) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ. ಘಟನೆ ಭಾನುವಾರ ಸಂಜೆ ಸಂಭವಿಸಿದೆ.
ಮೃತ ಹರೀಶ್ ಕಳೆದ 10 ವರ್ಷಗಳಿಂದ ಮುಡಿಪುವಿನಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಗಾರ್ಡ್ (ಕಾವಲುಗಾರ) ಆಗಿ ಕೆಲಸ ನಿರ್ವಹಿಸುತ್ತಿದ್ದರು. ವರ್ಷದ ಹಿಂದಷ್ಟೇ ಹರೀಶ್ ಸಿದ್ದಕಟ್ಟೆ-ಸಂಗಬೆಟ್ಟು ಎಂಬಲ್ಲಿಯ ಯುವತಿಯನ್ನು ವಿವಾಹವಾಗಿದ್ದರು. ಇದೀಗ ಆಕೆ 7 ತಿಂಗಳ ಗರ್ಭಿಣಿಯಾಗಿದ್ದಾಳೆ. ಮಾ.12 ರಂದು ಮೃತ ಹರೀಶ್, ಕೊಣಾಜೆ ಮುಚ್ಚಿಲಕೋಡಿ ನಿವಾಸಿ, ತನ್ನ (ತಾಯಿಯ ಅಕ್ಕನ ಮಗ) ಸಂಬಂಧಿಯೂ ಆದ ರಮೇಶ್ ಶೆಟ್ಟಿಗಾರ್ ಎಂಬವರಿಗೆ ಕರೆ ಮಾಡಿದ್ದರು. ಈ ವೇಳೆ ತನ್ನ ಬ್ಯಾಗಿನಲ್ಲಿ ಭಸ್ಮ, ತಗಡು ದೊರೆತಿದ್ದು, ಯಾರೋ ವಾಮಾಚಾರ ಮಾಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದನಂತೆ.
ದಾರಿಮಧ್ಯೆ ಮೃತಪಟ್ಟ ಹರೀಶ್: ಇದಕ್ಕೆ ರಮೇಶನು ಮನೆಗೆ ಬಾ, ಅಲ್ಲಿ ಕುಳಿತುಕೊಂಡು ಮಾತನಾಡುವ ಎಂದು ತಿಳಿ ಹೇಳಿದ್ದರು. ಆ ಮಾತಿನಂತೆ ಹರೀಶ್ ಭಾನುವಾರ ಮನೆಗೆ ಸಹ ಬಂದಿದ್ದರು. ಆದರೆ, ಈ ವೇಳೆ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಕಂಡು ಗಾಬರಿಯಾದ ಸ್ಥಳೀಯರು ಪೊಲೀಸರಿಗೆ ಸುದ್ದಿ ತಿಳಿಸಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಕೊಣಾಜೆ ಪೊಲೀಸರು, ತಕ್ಷಣ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡಿದ್ದರು. ಆದರೆ, ಖುದ್ದು ಆಂಬ್ಯುಲೆನ್ಸ್ ಏರಿದ್ದ ಹರೀಶ್ ದಾರಿಮಧ್ಯೆ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಹರೀಶನಿಗೆ ತನ್ನ ಪತ್ನಿ ಸರಿಯಾಗಿ ಮಾತನಾಡುತ್ತಿಲ್ಲ, ಕಿವಿ ಕೇಳದಂತೆ ವರ್ತಿಸುತ್ತಾಳೆ ಅನ್ನುವ ಕೊರಗು ಇತ್ತು. ಇತ್ತೀಚೆಗೆ ಈ ಬಗ್ಗೆ ಸಂಬಂಧಿಕರೊಂದಿಗೆ ತನ್ನ ನೋವು ತೋಡಿಕೊಂಡಿದ್ದ. ಅಲ್ಲದೇ, ನನಗೆ ಮೋಸ ಮಾಡಿ ವಿವಾಹ ಮಾಡಿರುವುದಾಗಿ ಆರೋಪ ಸಹ ಮಾಡಿದ್ದನು. ಆರ್ಥಿಕವಾಗಿ ಯಾವುದೇ ರೀತಿಯ ಸಂಕಷ್ಟ ಇಲ್ಲದ ಹರೀಶ್ ಕುಟುಂಬವು ಇದೇ ತಿಂಗಳ ಒಳಗೆ ಪತ್ನಿಗೆ ಸೀಮಂತ ಮಾಡುವ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಆದರೆ, ಇದರ ಮಧ್ಯೆ ಈ ಘಟನೆ ನಡೆದಿದೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಇತ್ತೀಚೆಗಷ್ಟೇ ಮದುವೆಯಾಗಿದ್ದ ವ್ಯಕ್ತಿ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ!