ಉಳ್ಳಾಲ(ದಕ್ಷಿಣ ಕನ್ನಡ): ಟಯರ್ ಸಿಡಿದು ಮೀನು ಸಾಗಣೆಯ ಪಿಕಪ್ ವಾಹನ ಪಲ್ಟಿಯಾದ ಘಟನೆ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪಿಕಪ್ ವಾಹನ ಪಲ್ಟಿಯಾಗಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆಯಾಯಿತು.
ಮಲ್ಪೆ ಬಂದರಿನಿಂದ ಉಳ್ಳಾಲ ಆಯಿಲ್ ಮಿಲ್ಗೆ ಮೀನು ಸಾಗಾಟ ನಡೆಸುವ ವಾಹನ, ನೇತ್ರಾವತಿ ಸೇತುವೆ ತಲುಪುತ್ತಿದ್ದಂತೆ ಎದುರುಗಡೆಯ ಟಯರ್ ಸಿಡಿದಿದೆ. ಪರಿಣಾಮ ಒಂದು ದಿಕ್ಕಿನತ್ತ ತೆರಳಿದ ಪಿಕಪ್ ವಾಹನ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆಯಲ್ಲಿ ಪಿಕಪ್ ವಾಹನ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಇನ್ನು ವಾಹನದಲ್ಲಿದ್ದ ಮೀನುಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಗೋವುಗಳನ್ನು ತುಂಬಿದ್ದ ಪಿಕಪ್ ವಾಹನ ಸೇತುವೆಗೆ ಡಿಕ್ಕಿ: ಅಕ್ರಮವಾಗಿ ಗೋವುಗಳನ್ನು ಸಾಗಣೆ ಮಾಡುತ್ತಿದ್ದ ಬೋಲೆರೋ ಪಿಕಪ್ ವಾಹನ ಸೇತುವೆಗೆ ಡಿಕ್ಕಿ ಹೊಡೆದು ಜಾನುವಾರುಗಳು ಸೇರಿ ಇಬ್ಬರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿ-ಹಾವೇರಿ ರಸ್ತೆಯ ಬೋರನಗುಡ್ಡ ಗ್ರಾಮದ ಭೂತೇಶ್ವರ ದೇವಸ್ಥಾನದ ಬಳಿ ನಡೆದಿದೆ. ಮಧ್ಯ ರಾತ್ರಿ 2 ಗಂಟೆ ಸುಮಾರಿಗೆ ಅಕ್ರಮವಾಗಿ ಹಾವೇರಿ ಕಡೆಯಿಂದ ಶಿರಸಿ ಕಡೆಗೆ ಗೋವುಗಳನ್ನು ಸಾಗಿಸುತ್ತಿದ್ದ ಬೋಲೆರೋ ಪಿಕ್ಆಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ವಾಹನ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಮತ್ತೋರ್ವನಿಗೆ ಸಣ್ಣಪುಟ್ಟ ಗಾಯವಾಗಿದೆ.
ಗಾಯಳುಗಳನ್ನು ಶಿರಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನದಲ್ಲಿದ್ದ 6 ಗೋವುಗಳಲ್ಲಿ 5ಗೋವುಗಳು ಗಾಯಗೊಂಡಿದ್ದು, ಒಂದು ಗೋವು ಸಾವನ್ನಪ್ಪಿದೆ. ಬನವಾಸಿ ಪೊಲೀಸ್ ಠಾಣೆಯ ಇ.ಆರ್.ಎಸ್. 112 ವಾಹನ ಸ್ಥಳಕ್ಕೆ ಭೇಟಿ ನೀಡಿ ಗೋವುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಧಾರವಾಡದಲ್ಲಿ ಅಪರಿಚಿತ ವಾಹನ ಡಿಕ್ಕಿ: ಕಾನ್ಸ್ಟೇಬಲ್ ಸಾವು, ಮಹಿಳಾ ಸಿಬ್ಬಂದಿಗೆ ಗಂಭೀರ ಗಾಯ