ಭಟ್ಕಳ(ಉತ್ತರ ಕನ್ನಡ): ಮುರುಡೇಶ್ವರದಲ್ಲಿ ಸಮುದ್ರ ಅಲೆಗೆ ಸಿಕ್ಕಿ ಪ್ರವಾಸಿಗನೊಬ್ಬ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಕೊಚ್ಚಿ ಹೋಗುತ್ತಿದ್ದ ಮತ್ತಿಬ್ಬರು ಪ್ರವಾಸಿಗರನ್ನು ಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಪ್ರವಾಸಿಗರಾದ ಹಸನ್ ಮುಜ್ಜಿಗಿ ಗೌಡ (21) ಸಂಜೀವ ಹೆಬ್ಬಳ್ಳಿ(20) ರಕ್ಷಣೆಯಾಗಿದ್ದು, ಇವರ ಜೊತೆಯಲ್ಲಿ ಬಂದಿದ್ದ ಸಂತೋಷ ಹುಲಿಗುಂಡ (19)ನಾಪತ್ತೆಯಾಗಿದ್ದಾನೆ.
ನಾಪತ್ತೆಯಾದ ಯುವಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಕಲಘಟಗಿಯಿಂದ 22 ಮಂದಿ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ. ಬಿಪೊರ್ ಜಾಯ್ ಸೈಕ್ಲೋನ್ ಎಫೆಕ್ಟ್ ಇರುವ ಕಾರಣ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಸೂಚನಾ ಫಲಕ ಹಾಕಲಾಗಿದ್ದರು. ಇದನ್ನು ಲೆಕ್ಕಿಸದೆ ಪ್ರವಾಸಿಗರು ಸಮುದ್ರದ ನೀರಿಗೆ ಇಳಿಯುತ್ತಿದ್ದಾರೆ.
ಪ್ರವಾಸಿಗರಿಂದ ಲೈಫ್ ಗಾರ್ಡ್ ಸಿಬ್ಬಂದಿ ಮೇಲೆ ಹಲ್ಲೆ: ಬಿಪೊರ್ ಜಾಯ್ ಚಂಡಮಾರುತದ ಹಿನ್ನೆಲೆಯಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ನೀರಿಗೆ ಇಳಿಯಬೇಡಿ ಎಂದು ಸೂಚಿಸಿದ ಲೈಫ್ ಗಾರ್ಡ್ ಸಿಬ್ಬಂದಿ ಮೇಲೆ ಪ್ರವಾಸಿಗರು ಹಲ್ಲೆ ಮಾಡಿರುವ ಘಟನೆ ಮುರುಡೇಶ್ವರದಲ್ಲಿ ನಡೆದಿದೆ. ಮುರುಡೇಶ್ವರ ಕಡಲ ತೀರದಲ್ಲಿ ಅಲೆ ಅಬ್ಬರ ಜೋರಾಗಿರುವ ಹಿನ್ನೆಲೆಯಲ್ಲಿ ಮತ್ತು ವ್ಯಕ್ತಿಯೋರ್ವ ಕಣ್ಮರೆಯಾಗಿರುವ ಹಿನ್ನೆಲೆಯಲ್ಲಿ ನೀರಿಗೆ ಇಳಿಯದಂತೆ ಲೈಫ್ ಗಾರ್ಡ್ ಸಿಬ್ಬಂದಿ ಸೂಚಿಸಿದಾಗ, ಜಗಳಕ್ಕೆ ನಿಂತ ನಾಲ್ಕೈದು ಪ್ರವಾಸಿಗರು ಲೈಫ್ ಗಾರ್ಡ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ.
ಅರಬ್ಬೀ ಸಮುದ್ರದಲ್ಲಿ ಬಿಪೊರ್ ಜಾಯ್ ಚಂಡಮಾರುತ: ಅರಬ್ಬೀ ಸಮುದ್ರದಲ್ಲಿ ಕಳೆದ ಕೆಲ ದಿನಗಳಿಂದ ಕುಸಿತಗೊಂಡಿರುವ ವಾಯುಭಾರವು ಸದ್ಯ ಚಂಡಮಾರುತವಾಗಿ ಸೃಷ್ಟಿಯಾಗಿದೆ. ಈ ಚಂಡಮಾರುತದ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲರ್ಟ್ ಘೋಷಿಸಲಾಗಿದೆ. ಬಿಪರ್ಜಾಯ್ ಚಂಡಮಾರುತದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಬಿಸಿಲ ಧಗೆಗೆ ನಲುಗಿ ಹೋಗಿದ್ದು, ನೀರಿಗಾಗಿ ಜನರು ತತ್ತರಿಸುತ್ತಿದ್ದಾರೆ. ಎಲ್ಲೆಡೆ ನೀರಿಗಾಗಿ ಹಾಹಾಕಾರ ಕೇಳಿ ಬರುತ್ತಿದೆ. ಇದೀಗ ಹವಾಮಾನ ಇಲಾಖೆಯು ಅರಬ್ಬಿಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಚಂಡಮಾರುತ ಸೃಷ್ಟಿಯಾಗಿ ರಾಜ್ಯದ ಕರಾವಳಿಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.
ಹವಮಾನ ಇಲಾಖೆಯ ಮುನ್ಸೂಚನೆಯಂತೆ ಜೂನ್ 7 ರಿಂದ 11ರವರೆಗೆ ಭಾರೀ ಮಳೆಯಾಗಲಿದ್ದು, ಸಮುದ್ರದಲ್ಲಿ ಅಬ್ಬರ ಹೆಚ್ಚಾಗಲಿದೆ. ಆದ್ದರಿಂದ ಕಡಲ ತೀರ ಪ್ರದೇಶದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ದ.ಕ. ಜಿಲ್ಲಾಡಳಿತ ಸೂಚನೆ ನೀಡಿದೆ. ಕೇರಳಕ್ಕೆ ಜೂನ್ 4ರಂದು ಮುಂಗಾರು ಪ್ರವೇಶದ ನಿರೀಕ್ಷೆಯಿತ್ತು. ಆದರೆ, ಅದು ಮತ್ತಷ್ಟು ವಿಳಂಬದಿಂದ ಕರಾವಳಿಗೆ ಇನ್ನೂ ಮಳೆ ಬಂದಿಲ್ಲ. ಜೂನ್ 10ರ ವೇಳೆಗೆ ಕೇರಳಕ್ಕೆ ಮುಂಗಾರು ಆಗಮಿಸುವ ಸಾಧ್ಯತೆಯಿದ್ದು ಆನಂತರವಷ್ಟೇ ರಾಜ್ಯದ ಮುಂಗಾರು ಪ್ರವೇಶವಾಗಲಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಕಾಣಿಸಿಕೊಂಡಿದ್ದು, ಭಾರಿ ಮಳೆಯಾಗುವ ಸಾಧ್ಯತೆಯಿದೆ. ಅರಬ್ಬೀ ಸಮುದ್ರದಲ್ಲಿ ಕಳೆದ ಕೆಲ ದಿನಗಳಿಂದ ಕುಸಿತಗೊಂಡಿರುವ ವಾಯುಭಾರವು ಈಗ ಚಂಡಮಾರುತ ರೂಪ ಪಡೆದುಕೊಂಡಿದೆ. ಇದರಿಂದ ದಕ್ಷಿಣ ಭಾರತದ ಪಶ್ಚಿಮ ತೀರಗಳು ಅಪಾಯವನ್ನು ಎದುರಿಸುವ ಸಾಧ್ಯತೆಯಿದೆ. ಪ್ರಸ್ತುತ ಉತ್ತರದತ್ತ ಮುಖ ಮಾಡಿರುವ ಚಂಡಮಾರುತವು ಕರ್ನಾಟಕ ಕರಾವಳಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಿಸಲಿದೆ.
ಇದನ್ನೂ ಓದಿ: ಮನೆ ಖರೀದಿಸಿ ಗೃಹ ಪ್ರವೇಶ ಮಾಡಿದ ಯುವತಿ.. ಐದೇ ದಿನದಲ್ಲಿ ಆತ್ಮಹತ್ಯೆಗೆ ಶರಣು