ಮಂಗಳೂರು (ದಕ್ಷಿಣ ಕನ್ನಡ): ಪಣಂಬೂರು ಬೀಚ್ಗೆ ತೆರಳಿದ್ದ ವಿದ್ಯಾರ್ಥಿನಿಯೊಬ್ಬರಿಗೆ ಯುವಕರ ಗುಂಪೊಂದು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪ ಪ್ರಕರಣ ನಡೆದಿದೆ. ಮಂಗಳೂರಿನ ಮೆಡಿಕಲ್ ಕಾಲೇಜೊಂದರ 6 ವಿದ್ಯಾರ್ಥಿಗಳು ಶುಕ್ರವಾರ ಸಂಜೆ 5.30ರ ಸುಮಾರಿಗೆ ಪಣಂಬೂರು ಬೀಚ್ಗೆ ಹೋಗಿದ್ದಾರೆ. ಯುವಕರು ಬೈಕ್ನಲ್ಲಿ ಬಂದಿದ್ದರೆ, ಯುವತಿಯರು ಬಸ್ನಲ್ಲಿ ತೆರಳಿದ್ದರು.
ಇವರು ಬೀಚ್ನಲ್ಲಿದ್ದ ವೇಳೆ ಇಬ್ಬರು ಅಪರಿಚಿತರು ಇವರ ಚಲನವಲನಗಳನ್ನು ಗಮನಿಸುತ್ತ, ಮೊಬೈಲ್ ಫೋನ್ಗಳಲ್ಲಿ ವಿಡಿಯೋ ಮಾಡಿದ್ದಾರೆ. ವಿದ್ಯಾರ್ಥಿಗಳು ಇದನ್ನು ಗಮನಿಸಿದರೂ ಅದನ್ನು ಪ್ರಶ್ನಿಸದೆ ತಮ್ಮ ಪಾಡಿಗೆ ತಾವು ಇದ್ದರು. ನಂತರ ಯುವಕರು ಬೈಕ್ನಲ್ಲಿ, ಯುವತಿಯರು ಬಸ್ನಲ್ಲಿ ಹಿಂದಿರುಗಿದ್ದಾರೆ.
ನಾಲ್ವರು ವಿದ್ಯಾರ್ಥಿನಿಯರ ಪೈಕಿ ಓರ್ವ ಯುವತಿ ನಗರದ ಚಿಲಿಂಬಿಯಲ್ಲಿ ಬಸ್ನಿಂದ ಇಳಿದು ತನ್ನ ಪಿಜಿ ಕಡೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಪಣಂಬೂರು ಬೀಚ್ನಲ್ಲಿ ಹಿಂಬಾಲಿಸುತ್ತಿದ್ದ ಅದೇ ಅಪರಿಚಿತರು ಆಕೆಯನ್ನು ಹಿಂಬಾಲಿಸಿಕೊಂಡು ಬಂದು ಯುವತಿಗೆ ಬೆದರಿಸಿದ್ದಾರೆ. ಅಲ್ಲದೆ 'ಕೇರಳ ಸ್ಟೋರಿ' ನೋಡಿಯೂ ನಿಮಗೆ ಬುದ್ಧಿ ಬರುವುದಿಲ್ವಾ ಎಂದು ಅವಾಚ್ಯ ಪದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ವಿದ್ಯಾರ್ಥಿನಿಯರು ಉರ್ವ ಸ್ಟೋರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರತ್ಯೇಕ ಪ್ರಕರಣ- ಅಪ್ತಾಪ್ತೆಗೆ ಲೈಂಗಿಕ ದೌರ್ಜನ್ಯ, ಪೋಕ್ಸೊ ಕೇಸ್: ಬಂಟ್ವಾಳದಲ್ಲಿ ಅಪ್ರಾಪ್ತೆಯೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಆರೋಪಿ ಅಬ್ದುಲ್ ಸಮೀರ್ ಎಂಬಾತನ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ. ಈ ಘಟನೆ 2019ರ ನವೆಂಬರ್ ಡಿಸೆಂಬರ್ ಮಧ್ಯೆ ನಡೆದಿದ್ದು, ಇದೀಗ ತಡವಾಗಿ ಪ್ರಕರಣ ದಾಖಲಾಗಿದೆ.
ಅಪ್ರಾಪ್ತ ಬಾಲಕಿಯನ್ನು ಆರೋಪಿ ಅಬ್ದುಲ್ ಸಮೀರ್ ಮೊಬೈಲ್‌ನಲ್ಲಿ ಸಂಪರ್ಕಿಸಿ ಬಳಿಕ ಪ್ರೀತಿಸುವ ನಾಟಕವಾಡಿ, ಮದುವೆಯಾಗುತ್ತೇನೆ ಎಂದು ನಂಬಿಸಿ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ನಿರ್ಮಾಣ ಹಂತದ ಮನೆಯೊಂದರ ಬಳಿ 2019ರ ನವೆಂಬರ್ ತಿಂಗಳಿನಿಂದ 2019ರ ಡಿಸೆಂಬರ್ ತಿಂಗಳ ಕೊನೆಯ ವಾರದ ಅವಧಿಯಲ್ಲಿ ಲೈಂಗಿಕ ದೌರ್ಜನ್ಯವೆಸಗಿದ್ದನು. ಬಳಿಕ ಮೋಸ ಮಾಡಿ ವಿದೇಶಕ್ಕೆ ಪರಾರಿಯಾಗಿದ್ದಾನೆ. ಅಬ್ದುಲ್ ಸಮೀರ್ ಮದುವೆಯಾಗುತ್ತೇನೆಂದು ಹೇಳಿ ಆಕೆಗೆ ಮೊಬೈಲ್ ಕೊಟ್ಟು ನಂಬಿಸಿ ಬಲಾತ್ಕಾರವೆಸಗಿ ಮದುವೆಯಾಗದೇ ಮೋಸ ಮಾಡಿರುವುದಾಗಿ ಪ್ರಕರಣ ದಾಖಲಾಗಿದೆ.
ಗಾಂಜಾ ಸೇವನೆ-ಆರೋಪಿ ಬಂಧನ: ನಗರದ ಚಿಲಿಂಬಿ ಅಪಾರ್ಟ್‌ಮೆಂಟ್ ಬಳಿ ಗಾಂಜಾ ಸೇವನೆ ಆರೋಪದಲ್ಲಿ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ಎರ್ನಾಕುಲಂ ಕಾಕನಾಡು ನಿವಾಸಿ ವೈಶಾಕ್ ಶಾಜಿ (35) ಬಂಧಿತ ಆರೋಪಿ. ಈತ ಜು. 20 ರಂದು ಸಂಜೆ 7 ಗಂಟೆಗೆ ಚಿಲಿಂಬಿ ಅಪಾರ್ಟ್ ಮೆಂಟ್‌ವೊಂದರ ಬಳಿ ಮಾದಕ ವಸ್ತು ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡು ಬಂದಿದ್ದನು.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆತನನ್ನು ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ಗೊಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಆರೋಪಿ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯಿದೆ 1985ರ ಅಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನೈತಿಕ ಪೊಲೀಸ್ ಗಿರಿ ಪ್ರಕರಣ: ಮಂಗಳೂರಿನ ಮೂವರಿಗೆ ಗಡಿಪಾರು ನೋಟಿಸ್