ಮಂಗಳೂರು: ಜುಲೈ 23 ರಂದು ಕೇರಳದಲ್ಲಿರುವ ತನ್ನ ಅಜ್ಜ ಅಜ್ಜಿಯನ್ನು ಕೊಂದು ಅವರ ಚಿನ್ನಾಭರಣವನ್ನು ಮಂಗಳೂರಿಗೆ ಮಾರಲು ಬಂದಿದ್ದ ಮೊಮ್ಮಗನನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಕೇರಳದ ತ್ರಿಶೂರಿನ ವೈಲತ್ತೂರು ಪನಾಂಗೈಟ್ ಹೌಸ್ ನಿವಾಸಿ ಅಹಮ್ಮದ್ ಆಕ್ಕಲ್ (27) ಬಂಧಿತ ವ್ಯಕ್ತಿ.
ಈತ ನಿನ್ನೆ ಮಂಗಳೂರು ಕಾರ್ ಸ್ಟ್ರೀಟ್ ಪರಿಸರದಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ. ಈತ ಚಿನ್ನಾಭರಣಗಳನ್ನು ಮಾರಾಟ ಮಾಡಲು ಬಂದಿದ್ದಾನೆ ಎಂಬ ಮಾಹಿತಿ ಮಂಗಳೂರು ಉತ್ತರ ಠಾಣೆ ಪೊಲೀಸರಿಗೆ ಸಿಕ್ಕಿತ್ತು. ಅದರಂತೆ ಮಂಗಳೂರು ಉತ್ತರ ಠಾಣಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆತನು ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ವಡೆಕಾಡ್ ಎಂಬಲ್ಲಿ ಜುಲೈ 23 ರಂದು ರಾತ್ರಿ ತನ್ನ ಅಜ್ಜ ಮತ್ತು ಅಜ್ಜಿಯನ್ನು ಕೊಲೆ ಮಾಡಿ ಅವರ ಚಿನ್ನಾಭರಣಗಳನ್ನು ದೋಚಿ ಬಂದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆತನ ಬಳಿಯಿದ್ದ ಮುತ್ತಿನ ಎರಡು ಎಳೆಯ ಬಂಗಾರದ ಸರ, ಸಣ್ಣ ಪದಕವಿರುವ 1 ಚೈನ್, 3 ಜೊತೆ ಕಿವಿಯೊಲೆ, 5 ಉಂಗುರ, 2 ಕೈಬಳೆ, ಪಾಸ್ ಪೋರ್ಟ್ ಹಾಗೂ ಇತರೆ ದಾಖಲಾತಿಗಳು ದೊರಕಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ನಗರದ ಉಪ ಪೊಲೀಸ್ ಆಯುಕ್ತ ಅಂಶು ಕುಮಾರ್ ಐಪಿಎಸ್ ಮತ್ತು ಬಿ ಪಿ ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಉಪ ಆಯುಕ್ತ ಮಹೇಶ್ ಕುಮಾರ್ ನಿರ್ದೇಶನದಂತೆ ರಾಘವೇಂದ್ರ ಎಂ ಬೈಂದೂರು, ಪಿಐ ಅವರ ಮುಂದಾಳತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಎಎಸ್‌ಐ ದಾಮೋದರ್ ಮತ್ತು ಸಿಬ್ಬಂದಿ ಮದನ್ ಸಿ. ಎಂ ಸತೀಶ್ ಮತ್ತು ಗುರು ಬಿ ಟಿ ಭಾಗವಹಿಸಿದ್ದರು.
ಶೋರೂಂನಲ್ಲಿ ವಾಹನ ಕಳವು- ಆರೋಪಿಗಳ ಬಂಧನ: ಹಳೆಯ ವಾಹನಗಳ ಖರೀದಿ ಮತ್ತು ಮಾರಾಟದ ಶೋರೂಂನಲ್ಲಿ ಎರಡು ಕಾರು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಓರ್ವ ಅಪ್ರಾಪ್ತ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಮಂಗಳೂರು ತಾಲೂಕಿನ ಕಿನ್ನಿಪದವು ನಿವಾಸಿ ಮಹಮ್ಮದ್ ಶಫೀಕ್ @ ಶಫೀಕ್ (21) ಮತ್ತು ಅಪ್ರಾಪ್ತ ಬಾಲಕ ಬಂಧಿತರು.
ಜುಲೈ 12 ರಂದು ರಾತ್ರಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟಿನ ಕಾರ್ ಮಾರ್ಟ್ ಎಂಬ ಹೆಸರಿನ ಹಳೆಯ ವಾಹನಗಳ ಖರೀದಿ ಮತ್ತು ಮಾರಾಟದ ಶೋರೂಂಗೆ ದ್ವಿಚಕ್ರ ವಾಹನದಲ್ಲಿ ಬಂದ ಕಳ್ಳರು ಶೋರೂಂನ ಕಛೇರಿಯ ಗ್ಲಾಸ್ ಡೋರ್ ಅನ್ನು ಸುತ್ತಿಗೆಯಿಂದ ಜಖಂಗೊಳಿಸಿ ಸಂಪೂರ್ಣ ಪುಡಿ ಮಾಡಿ ಒಳಪ್ರವೇಶಿಸಿ ಆರೋಪಿಗಳು ಕಳವು ಮಾಡಿದ್ದರು.
ಕಚೇರಿಯೊಳಗೆ ಟೇಬಲ್ ಮೇಲೆ ಇದ್ದ ಒನ್ ಪ್ಲಸ್ ಮೊಬೈಲ್ ಫೋನ್, HP ಕಂಪನಿಯ ಲ್ಯಾಪ್ ಟಾಪ್ ಹಾಗೂ HP ಕಂಪನಿಯ ಪ್ರಿಂಟರ್ ಹಾಗೂ ಶೋರೂಂನ ಪಾರ್ಕ್ನಲ್ಲಿ ನಿಲ್ಲಿಸಿದ್ದ ಕ್ರೆಟಾ ಕಾರು ಹಾಗೂ ಸ್ವಿಫ್ಟ್ ಕಾರನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಕಾರ್ ಮಾರಾಟ ಮಾಲೀಕ ಅಬೀದ್ ಅಹಮ್ಮದ್ ಸೂರಲ್ಪಾಡಿ ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪತ್ತೆ ಕಾರ್ಯವನ್ನು ನಡೆಸಲಾಗಿದೆ.
ಈ ಪ್ರಕರಣದಲ್ಲಿ ಕಳವಾದ ಕಾರುಗಳ ಪತ್ತೆಯ ಬಗ್ಗೆ ವಿಶೇಷ ಕರ್ತವ್ಯದಲ್ಲಿರುವ ಸಮಯದಲ್ಲಿ ಬಾಲಕನಿಂದ ಕಳ್ಳತನವಾದ ಸ್ವಿಫ್ಟ್ ಕಾರನ್ನು ವಶಕ್ಕೆ ಪಡೆಯಲಾಗಿದೆ. ಆತ ನೀಡಿದ ಮಾಹಿತಿಯಂತೆ ಮಂಗಳೂರು ತಾಲೂಕಿನ ಕಿನ್ನಿಪದವು ನಿವಾಸಿ ಮಹಮ್ಮದ್ ಶಫೀಕ್ ಯಾನೆ ಶಫೀಕ್ (21) ಎಂಬಾತನು ಬೈಕ್ನಲ್ಲಿ ಬರುವಾಗ ಮರಕಡ ಬಸ್ ನಿಲ್ದಾಣದ ಬಳಿ ಬಂಧಿಸಲಾಗಿದೆ.
ಆರೋಪಿ ತೋರಿಸಿಕೊಟ್ಟಂತ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಕ್ರೆಟಾ ಕಾರನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಸುತ್ತಿಗೆ, ಕೃತ್ಯದ ಸಮಯ ತಲೆಗೆ ಧರಿಸಿದ ಹೆಲ್ಮೆಟ್, ಮೈಮೇಲೆ ಧರಿಸಿದ ರೈನ್ ಕೋಟ್, ಕೈಗೆ ಧರಿಸಿದ ಗೌಸ್, ಮುಖಕ್ಕೆ ಹಾಕಿದ ಮಾಸ್ಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಮಹಮ್ಮದ್ ಶಫೀಕ್ ಯಾನೆ ಶಫೀಕ್ ಒಂದು ವರ್ಷದ ಹಿಂದೆ ಮೂಡಬಿದಿರೆ ಠಾಣಾ ವ್ಯಾಪ್ತಿಯ ಕೆಸರುಗದ್ದೆ ಎಂಬಲ್ಲಿ ಮನೆಯಿಂದ ಕಳ್ಳತನ ಮಾಡಿದ್ದ ದ್ವಿಚಕ್ರ ವಾಹನವನ್ನು ಕೂಡ ಆತನಿಂದ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ವಾಹನಗಳ ಒಟ್ಟು ಅಂದಾಜು ಮೌಲ್ಯ ರೂ. 15.50 ಲಕ್ಷ ಆಗಿದೆ. ಆರೋಪಿ ಮಹಮ್ಮದ್ ಶಫೀಕ್ ಯಾನೆ ಶಫೀಕ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 3 ದಿನಗಳವರೆಗೆ ಪೊಲೀಸ್ ಕನ್ನಡಿಗೆ ಪಡೆಯಲಾಗಿದೆ.
ಇದನ್ನೂ ಓದಿ: ಹಸು ಕದಿಯಲು ಬಂದು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಕಳ್ಳರಿಗೆ ಮನಸೋಇಚ್ಛೆ ಥಳಿತ; ಓರ್ವ ಸಾವು, ವಾಹನಕ್ಕೆ ಬೆಂಕಿ