ಮಂಗಳೂರು : ಇತ್ತೀಚೆಗೆ ಬಸ್ ಅಪಘಾತದಿಂದ ಮಹಿಳೆಯೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆಯ ವಿಡಿಯೋ ವೈರಲ್ ಆಗಿತ್ತು. ಇದೀಗ ಬಸ್ ಚಾಲಕ ಮತ್ತು ಪಾದಾಚಾರಿ ಮಹಿಳೆಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪಾದಚಾರಿ ಮಹಿಳೆ ಅಪಘಾತದಿಂದ ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ತೌಡುಗೋಳಿ ಸಮೀಪದ ನರಿಂಗಾನದಲ್ಲಿ ನಡೆದಿತ್ತು.
ಮಂಗಳೂರಿನಿಂದ ಮುಡಿಪುಗೆ ಚಲಿಸುವ ಗೋಪಾಲಕೃಷ್ಣ ಖಾಸಗಿ ಬಸ್ ಚಾಲಕರ ಸಮಯಪ್ರಜ್ಞೆಯಿಂದ ಮಹಿಳೆಯ ಜೀವ ಉಳಿದಿದೆ ಎಂದು ಶ್ಲಾಘಿಸಲಾಗಿತ್ತು. ಪಾದಾಚಾರಿ ಮಹಿಳೆ ಪಕ್ಕದಲ್ಲಿ ಬರುವ ವಾಹನಗಳನ್ನು ಗಮನಿಸದೇ ತನ್ನ ಪಾಡಿಗೆ ರಸ್ತೆ ದಾಟುತ್ತಿದ್ದರು. ಈ ವೇಳೆ ಎದುರಿನಿಂದ ವೇಗವಾಗಿ ಬಸ್ ಬಂದಿದೆ. ಮಹಿಳೆ ರಸ್ತೆ ದಾಟುವುದನ್ನು ಗಮನಿಸಿದ ಡ್ರೈವರ್ ಕೂಡಲೇ ಎಡಕ್ಕೆ ಬಸ್ ತಿರುಗಿಸಿದ್ದರಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದರು.
ಬಳಿಕ, ಅಲ್ಲಿದ್ದವರು ಮಹಿಳೆಯ ಆರೋಗ್ಯ ವಿಚಾರಿಸಿ ಕಳುಹಿಸಿದ್ದರು. ಘಟನೆಯ ಅಚ್ಚರಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಂಗಳೂರು ನಗರ ಪೊಲೀಸರು ಬಸ್ ಚಾಲಕ ಮತ್ತು ಮಹಿಳೆಯ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸ್ ಅಧಿಕಾರಿ ಪ್ರತಿಕ್ರಿಯೆ: ಜೂನ್ 20 ರಂದು ಮದ್ಯಾಹ್ನ 12 ಗಂಟೆಗೆ ಮುಡಿಪು ದಿಂದ ತೌಡಗೋಳಿ ಮಾರ್ಗವಾಗಿ ಮಂಗಳೂರು ಕಡೆಗೆ KA51AC7835 ಗೋಪಾಲಕೃಷ್ಣ ಬಸ್ಸಿನ ಚಾಲಕ ತ್ಯಾಗರಾಜ್ ಬಸ್ ಅನ್ನು ದುಡುಕುತನ ಹಾಗು ನಿರ್ಲಕ್ಷತನದಿಂದ ಸಾರ್ವಜನಿಕ ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಕರ್ಕಶ ಹಾರ್ನ್ ಹಾಕುತ್ತಾ ಬಸ್ ಚಲಾಯಿಸಿದ್ದರಿಂದ ಚಾಲಕನ ಮೇಲೆ ಸಂಚಾರ ದಕ್ಷಿಣ ಪೊಲೀಸ್ ಠಾಣಾ ಸಿಆರ್ ಸಂಖ್ಯೆ 148/23ಕಲಂ 279,336 ಐಪಿಸಿ ಜೊತೆಗೆ ರೂಲ್ 211(2) ಆರ್/ಡಬ್ಲ್ಯೂ 177 ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿ ಪಾದಚಾರಿ ಮಹಿಳೆಯ ನಿರ್ಲಕ್ಷ್ಯದ ನಡಿಗೆಗಾಗಿ ಆಕೆಯ ಮೇಲೂ ಸೆಕ್ಷನ್ 13 ಟ್ರಾಫಿಕ್ ಕಂಟ್ರೋಲ್ ರೂಲ್ಸ್ ಮತ್ತು ಸೆಕ್ಷನ್ 92ಜಿ ಕೆಪಿ ಆಕ್ಟ್ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ- ಬ್ಯಾಂಕ್ ಉದ್ಯೋಗಿ ಸಾವು : ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದು ಬ್ಯಾಂಕ್ ಉದ್ಯೋಗಿ ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರ ವಲಯದ ವಾಮಂಜೂರು ಸಹಕಾರಿ ವ್ಯವಸಾಯ ಬ್ಯಾಂಕ್ ಎದುರು ನಡೆದಿದೆ. ಪೊಳಲಿ ಕರಿಯಂಗಳ ನಿವಾಸಿ ಸಂತೋಷ್ ಕುಮಾರ್ (34) ಮೃತರು. ಸಂತೋಷ್ ವಾಮಂಜೂರಿನಲ್ಲಿರುವ ಸಹಕಾರಿ ವ್ಯವಸಾಯ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದು, ಎಂದಿನಂತೆ ಇಂದು ಬೆಳಗ್ಗೆ ತನ್ನ ಬೈಕ್ ನಲ್ಲಿ ಕೆಲಸಕ್ಕೆ ತೆರಳುತ್ತಿದ್ದರು.
ಈ ವೇಳೆ ಗುರುಪುರ ವ್ಯವಸಾಯ ಬ್ಯಾಂಕ್ ಮುಂಭಾಗದಲ್ಲಿ ಹಂಪ್ಸ್ ಗಳಿದ್ದ ಪರಿಣಾಮ ಬೈಕ್ ನಿಧಾನ ಮಾಡಿದ್ದು, ಹಿಂದಿನಿಂದ ಬರುತ್ತಿದ್ದ ಮೂಡುಬಿದಿರೆ- ಮಂಗಳೂರು ಸಂಚರಿಸುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಸಂತೋಷ್ ಅವರನ್ನು ತಕ್ಷಣ ಮಂಗಳೂರು ನಗರದ ವೆನ್ ಲಾಕ್ ಆಸ್ಪತ್ರೆಗೆ ರವಾನಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಎ.ಜೆ. ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಷ್ಟರಲ್ಲಿ ಸಂತೋಷ್ ಮೃತಪಟ್ಟಿದ್ದಾರೆ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Viral video: ಉಳ್ಳಾಲದಲ್ಲಿ ಪವಾಡ ಸದೃಶ್ಯ ರೀತಿ ಮಹಿಳೆ ಪಾರು