ಮಂಗಳೂರು : ಉದ್ಯಮಿಯೊಬ್ಬರು ಕಟ್ಟಡದ 17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಬೆಂದೂರುವೆಲ್ನ ಅಟ್ಲಾಂಟಿಕ್ ಅಪಾರ್ಟೆಂಟ್ನಲ್ಲಿ ಇಂದು ನಡೆದಿದೆ. ನಗರದಲ್ಲಿ ಕ್ವಾರೆ ಹಾಗೂ ಬಿಲ್ಡರ್ ಉದ್ಯಮದ ವ್ಯವಹಾರ ನಡೆಸುತ್ತಿದ್ದ ಮೋಹನ್ ಅಮೀನ್ (62) ಸಾವಿಗೀಡಾದವರು.
ಇಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಕೆಳಗೆ ಬಿದ್ದ ರಭಸಕ್ಕೆ ತಲೆ ಸಂಪೂರ್ಣ ಛಿದ್ರಗೊಂಡಿದೆ. ವಿಜಯವಾಹಿನಿ ಎಂಬ ಹೆಸರಿನ ಟಿಪ್ಪರ್, ಕ್ವಾರೆ, ಜಲ್ಲಿಕಲ್ಲು ಬಿಸ್ನೆಸ್ ಹೊಂದಿದ್ದ ಇವರು ಮಲ್ಲಿಕಟ್ಟೆಯಲ್ಲಿ ಕಚೇರಿ ಹೊಂದಿದ್ದರು.
"ಡೆತ್ ನೋಟ್ ದೊರೆತಿದ್ದು, ನನ್ನ ಸಾವಿಗೆ ನಾನೇ ಕಾರಣ. ಪತ್ನಿ, ಮಕ್ಕಳನ್ನು ಕ್ಷಮಿಸಿ'' ಎಂದಷ್ಟೇ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕದ್ರಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಖರ್ಚಿಗೆ ಹಣ ಕೊಡಲಿಲ್ಲ ಎಂದು ವಿದ್ಯಾರ್ಥಿ ಆತ್ಮಹತ್ಯೆ : ಕಾಲೇಜಿಗೆ ಹೋಗುವಾಗ ಮನೆಯವರು ಖರ್ಚಿಗೆ ಹಣ ಕೊಡಲಿಲ್ಲ ಎಂದು ಡಿಪ್ಲೊಮಾ ವಿದ್ಯಾರ್ಥಿಯೊಬ್ಬ ನೊಂದು ಅತ್ಮಹತ್ಯೆ ಮಾಡಿಕೊಂಡ ಘಟನೆ ಇತ್ತೀಚೆಗೆ ಉಳ್ಳಾಲದ ಕುತ್ತಾರಿನ ಸುಭಾಷನಗರದಲ್ಲಿ ನಡೆದಿತ್ತು. ನಗರದ ಭಾಸ್ಕರ್ ಪೂಜಾರಿ ಮತ್ತು ದಾಕ್ಷಾಯಿಣಿ ಎಂಬವರ 17 ವರ್ಷ ವಯಸ್ಸಿನ ಪುತ್ರ ಸಾವಿಗೀಡಾದ ವಿದ್ಯಾರ್ಥಿ.
ಕಪಿತಾನಿಯೋದಲ್ಲಿ ಪ್ರಥಮ ಪಿಯುಸಿ ಮುಗಿಸಿದ್ದ ಯುವಕನನ್ನು ನಗರದ ಕೆಪಿಟಿಯಲ್ಲಿ ಮೆಕ್ಯಾನಿಕಲ್ ಡಿಪ್ಲೊಮಾ ಶಿಕ್ಷಣಕ್ಕಾಗಿ ಪೋಷಕರು ಸೇರಿಸಿದ್ದರು. ಮೊದಲ ದಿನ ಪೋಷಕರು 500 ರೂಪಾಯಿ ಕೊಟ್ಟು ಕಾಲೇಜಿಗೆ ಕಳುಹಿಸಿದ್ದರು. ಮರುದಿನ ಬೆಳಗ್ಗೆ ಮತ್ತೆ ಕಾಲೇಜಿಗೆ ಹೋಗುವಾಗ ಖರ್ಚಿಗೆ 500 ರೂ. ಕೊಡುವಂತೆ ಕೇಳಿದಾಗ ಪೋಷಕರು ಕೊಟ್ಟಿಲ್ಲ. ಇದರಿಂದ ಕೋಪಗೊಂಡ ಯುವಕ ಮನೆಯಲ್ಲೇ ಉಳಿದುಕೊಂಡಿದ್ದ. ತಂದೆ ಹೊರಹೋದಾಗ ಮತ್ತು ತಾಯಿ ಅಡುಗೆ ಕೋಣೆಯಲ್ಲೇ ಇದ್ದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ನಿ, ಮಕ್ಕಳನ್ನು ಕೊಂದು ಟೆಕ್ಕಿ ಆತ್ಮಹತ್ಯೆ : ಷೇರು ವ್ಯವಹಾರದಲ್ಲಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಟೆಕ್ಕಿಯೋರ್ವರು ಪತ್ನಿ ಮತ್ತು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಇತ್ತೀಚೆಗೆ ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೆಹಳ್ಳಿಯ ಸಾಯಿಗಾರ್ಡನ್ ಅಪಾರ್ಟ್ಮೆಂಟ್ನಲ್ಲಿ ನಡೆದಿತ್ತು. ಮೃತರನ್ನು ಆಂಧ್ರ ಪ್ರದೇಶ ಮೂಲದ ವೀರಾರ್ಜುನ ವಿಜಯ್ (31) ಪತ್ನಿ ಹೇಮಾವತಿ (29) ಮಕ್ಕಳಾದ ಮೋಕ್ಷ (2.5) ಹಾಗೂ ಸೃಷ್ಟಿ ಸುನಯನ (8 ತಿಂಗಳು) ಎಂದು ಗುರುತಿಸಲಾಗಿದೆ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಷೇರು ವ್ಯವಹಾರದಿಂದ ನಷ್ಟ.. ಪತ್ನಿ- ಮಕ್ಕಳನ್ನ ಕೊಂದು ಟೆಕ್ಕಿ ಆತ್ಮಹತ್ಯೆ.. 3 ದಿನ ಶವಗಳೊಂದಿಗೇ ಕಾಲ ಕಳೆದಿದ್ದ!