ಮಂಗಳೂರು: ನಗರದ ಉರ್ವಸ್ಟೋರ್ನ ಚಿಲಿಂಬಿ ಬಳಿ ರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋಮಾಂಸವನ್ನು ಪತ್ತೆಹಚ್ಚಿದ ಬಜರಂಗದಳದ ಕಾರ್ಯಕರ್ತರು ಆರೋಪಿಗಳ ಸಹಿತ ಮಾಂಸವನ್ನು ಉರ್ವ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳವಾರ ಗ್ರಾಮದ ದಾವೂದ್, ಜೋಕಟ್ಟೆ ಗ್ರಾಮದ ಬದ್ರುದ್ದೀನ್ ಮತ್ತು ಯಾಸೀನ್ ಎಂಬವರನ್ನು ಬಂಧಿಸಲಾಗಿದೆ. ಭಾನುವಾರ ಬೆಳಗ್ಗೆ ಗೋಮಾಂಸವನ್ನು ಜೋಕಟ್ಟೆಯಿಂದ ರಿಕ್ಷಾದಲ್ಲಿ ನಗರದ ಬೀಫ್ ಸ್ಟಾಲ್ಗಳಿಗೆ ಸಾಗಣೆ ಮಾಡುತ್ತಿದ್ದ ವೇಳೆ ಅವರನ್ನು ಹಿಡಿಯಲಾಗಿದೆ.
ಗೋಮಾಂಸ ಸಾಗಣೆಯ ಮಾಹಿತಿ ತಿಳಿದು ಬಜರಂಗದಳದ ಕಾರ್ಯಕರ್ತರು 6 ಗಂಟೆಯ ವೇಳೆಗೆ ಉರ್ವಸ್ಟೋರ್ ಚಿಲಿಂಬಿಯಲ್ಲಿ ರಿಕ್ಷಾವನ್ನು ತಡೆದು ಆರೋಪಿಯನ್ನು ಮಾಲು ಸಹಿತ ಪೊಲೀಸರಿಗೊಪ್ಪಿಸಿದ್ದಾರೆ. ಐದು ಗೋವುಗಳ 2.50 ಕ್ವಿಂಟಾಲ್ ಮಾಂಸವನ್ನು ರಿಕ್ಷಾದಲ್ಲಿ ಸಾಗಣೆ ಮಾಡಲಾಗುತ್ತಿತ್ತು.
ಜೋಕಟ್ಟೆಯ ಬದ್ರುದ್ದೀನ್ ಎಂಬಾತನಿಗೆ ಸೇರಿದ ಈ ಗೋಮಾಂಸವನ್ನು ದಾವೂದ್ ಎಂಬಾತ ರಿಕ್ಷಾದಲ್ಲಿ ಸಾಗಿಸುತ್ತಿದ್ದ. ಈ ಮಾಂಸ ಮಾರುಕಟ್ಟೆಯ ಮಾಂಸದಂಗಡಿಯ ಯಾಸಿನ್ ಎಂಬಾತನಿಗೆ ಸಾಗಿಸಲಾಗುತ್ತಿತ್ತು. ಎರಡು ತಿಂಗಳಿನಿಂದ ಈ ರೀತಿಯಲ್ಲಿ ಮಾಂಸ ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಯೇ ಬಜರಂಗದಳದ ಕಾರ್ಯಕರ್ತರಲ್ಲಿ ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ತಕ್ಷಣ ಉರ್ವ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಹಾಗೂ ಗೋಮಾಂಸವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿ, ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹಳೆ ದ್ವೇಷಕ್ಕೆ ಕಾರು ಹರಿಸಿ ಬಾಲಕನ ಕೊಂದ ಕೀಚಕ.. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ