ಮಂಗಳೂರು: ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ. ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸ ನಿರ್ವಹಿಸುವಾಗ, ಪ್ರಯಾಣದ ಸಮಯದಲ್ಲಿ ಮಾಸ್ಕ್ ಕಡ್ಡಾಯವಾಗಿದೆ. ಮಾಸ್ಕ್ ಧರಿಸದಿದ್ದಲ್ಲಿ ನಗರ ಪ್ರದೇಶದಲ್ಲಿ 200 ರೂ. ಹಾಗೂ ಇತರ ಪ್ರದೇಶಗಳಲ್ಲಿ 100 ರೂ. ದಂಡ ವಿಧಿಸಲಾಗುತ್ತದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ನೀಡಿದ್ದಾರೆ.
ಅಲ್ಲದೇ ಪ್ರತಿಯೊಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಸಾರ್ವಜನಿಕ ಸಭೆ ನಡೆಸುವುದನ್ನು ಹಾಗೂ ಗುಂಪುಗೂಡುವಿಕೆಯನ್ನು ನಿಷೇಧಿಸಲಾಗಿದೆ. ಮದುವೆ ಸಮಾರಂಭದಲ್ಲಿ 50 ಜನರು ಹಾಗೂ ಅಂತ್ಯಸಂಸ್ಕಾರ ಸಂಬಂಧಿತ ಕಾರ್ಯಗಳಲ್ಲಿ 20 ಜನರನ್ನು ಮೀರದಂತೆ ಎಚ್ಚರಿಕೆ ವಹಿಸತಕ್ಕದ್ದು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಗುಟ್ಕಾ, ಪಾನ್, ತಂಬಾಕು ಬಳಕೆ ನಿಷೇಧಿಸಲಾಗಿದ್ದು, ಅಲ್ಲಲ್ಲಿ ಉಗುಳಿದ್ದಲ್ಲಿ ದಂಡನಾರ್ಹ ಶಿಕ್ಷೆಯಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿದ್ದಾರೆ.
ಆದಷ್ಟು ಎಲ್ಲರೂ ಮನೆಯಲ್ಲಿಯೇ ಕೆಲಸ ನಿರ್ವಹಿಸಿದಲ್ಲಿ ಉತ್ತಮ. ಪಾಳಿಗಳಲ್ಲಿ ಕೆಲಸ ಮಾಡಿದಲ್ಲಿ ಇನ್ನೂ ಉತ್ತಮ. ಎಲ್ಲ ಕಡೆಗಳಲ್ಲಿ ಪ್ರವೇಶ ಹಾಗೂ ನಿರ್ಗಮನ ಸ್ಥಳಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಬಳಕೆ ಕಡ್ಡಾಯ. ಕೆಲಸ ಮಾಡುವ ಸ್ಥಳಗಳಲ್ಲಿ, ಆವರಣಗಳಲ್ಲಿ ಆಗಾಗ ಸ್ಯಾನಿಟೈಸೇಷನ್ ಮಾಡತಕ್ಕದ್ದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶಿಸಿದ್ದಾರೆ.