ಮಂಗಳೂರು: ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಖಾಸಗಿ ಆಸ್ಪತ್ರೆಗಳ ಭಾಗವಹಿಸುವಿಕೆಯ ಅಗತ್ಯವಿದೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ನೀಡಲು ಆರಂಭಿಸುವ ಬಗ್ಗೆ ಸರ್ಕಾರದಿಂದ ಯಾವುದೇ ಮಾರ್ಗಸೂಚಿ ಇನ್ನೂ ಬಂದಿಲ್ಲ. ಒಂದೆರಡು ದಿನಗಳಲ್ಲಿ ಬರಬಹುದೆಂಬ ನಿರೀಕ್ಷೆ ಇದೆ ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಿರಿ ಹೇಳಿದರು.
ಯಾವುದೇ ಸೋಂಕಿನ ಲಕ್ಷಣ ಇಲ್ಲದ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸುಲಭವಾಗಿ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಆದರೆ ವೆಂಟಿಲೇಟರ್, ಐಸಿಯು ಅಗತ್ಯವಿರುವ ಸಂದರ್ಭದಲ್ಲಿ ಅವರಲ್ಲಿ ಲಭ್ಯತೆ ಇದ್ದಲ್ಲಿ ಮಾಡಬಹುದು. ಇಲ್ಲದಿದ್ದಲ್ಲಿ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸಿಕೊಡಬಹುದು ಎಂದರು.
ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ಚಿಕಿತ್ಸೆ ಆರಂಭಿಸಿದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಒಂದು ವಿಭಾಗ ಅಥವಾ ಒಂದು ಅಂತಸ್ತನ್ನೇ ಕೋವಿಡ್ ವಿಭಾಗವಾಗಿ ಪ್ರತ್ಯೇಕಿಸಬೇಕಾಗುತ್ತದೆ. ಅದಕ್ಕೆ ಹೋಗಿ ಬರಲು ಸುಲಭವಾಗುವಂತೆ ಪ್ರತ್ಯೇಕ, ಬಾಗಿಲು, ಲಿಫ್ಟ್ ಗಳನ್ನು ಅಳವಡಿಸಬೇಕು. ಅಲ್ಲದೆ ಜನಸಾಮಾನ್ಯರು ಓಡಾಡದಂತೆ ಕೋವಿಡ್ ವಾರ್ಡ್ ಎಂದು ನಾಮಫಲಕ ಅಳವಡಿಸಬೇಕಾಗುತ್ತದೆ. ಅಲ್ಲದೆ ಅದಕ್ಕಾಗಿ ಬೇರೆಯೇ ವೈದ್ಯರು, ದಾದಿಯರು, ಸಿಬ್ಬಂದಿ ತಂಡವನ್ನು ಮೀಸಲಿಡಬೇಕು ಎಂದು ತಿಳಿಸಿದರು.
ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದಲ್ಲಿ ಮಾತ್ರ ಖಾಸಗಿ ಆಸ್ಪತ್ರೆಗಳ ಭಾಗವಹಿಸುವಿಕೆ ಹೆಚ್ಚಾಗಲಿದೆ. ಇಲ್ಲದಿದ್ದಲ್ಲಿ ಶ್ರೀಮಂತರು ಮಾತ್ರ ಹೋಗಬಹುದು. ಈಗಾಗಲೇ ದ.ಕ.ಜಿಲ್ಲೆಯಲ್ಲಿ 8 ಮೆಡಿಕಲ್ ಕಾಲೇಜುಗಳು ಹಾಗೂ ದೊಡ್ಡಮಟ್ಟದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ವಿಭಾಗ ತೆರೆಯುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಬಗ್ಗೆ ನಿನ್ನೆ ಸಂಸದರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದ್ದು, ಆ ಬಳಿಕ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ನಮ್ಮ ವೈದ್ಯಾಧಿಕಾರಿಗಳ ತಂಡ ಆ ಆಸ್ಪತ್ರೆಗೆ ಭೇಟಿ ನೀಡಿ ಅನುಕೂಲತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಾರೆ. ಆ ಬಳಿಕ ಚಿಕಿತ್ಸೆಯ ಖರ್ಚು ವೆಚ್ಚಗಳ ಬಗ್ಗೆ ಸರ್ಕಾರವೇ ದರ ನಿಗದಿಪಡಿಸಲಿದೆ ಎಂದು ಮಾಹಿತಿ ನೀಡಿದರು.