ಮಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯದ ಜನರು ಪ್ರವೇಶಿಸಲು, ನಿರ್ಗಮಿಸಲು ಅನುಕೂಲವಾಗುವಂತೆ ಕಾಸರಗೋಡು-ದ.ಕ.ಜಿಲ್ಲೆಯ ಗಡಿಯಲ್ಲಿನ ಕೆಲ ಚೆಕ್ಪೋಸ್ಟ್ಗಳ ಮೂಲಕ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.
ತಲಪಾಡಿ, ಸಾರಡ್ಕ, ನೆಟ್ಟಣಿಗೆ ಮೂಡ್ನೂರು, ಮೇಣಾಲಾ, ಜಾಲ್ಸೂರು ಚೆಕ್ ಪೋಸ್ಟ್ಗಳಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ನೀಡಿ ಉಳಿದ ಗಡಿಗಳಲ್ಲಿ ಮುಂದಿನ ಆದೇಶದವರೆಗೆ ಜನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶಿಸಿದ್ದಾರೆ.
ಆದರೆ ಇಲ್ಲಿ ಸಂಚಾರ ನಡೆಸುವವರು 72 ಗಂಟೆಗಳೊಳಗಿನ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿ ಹೊಂದಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಲ್ಲಿನ ಜನರು ನಿತ್ಯವೂ ದ.ಕ.ಜಿಲ್ಲೆಯ ಗಡಿ ಮೂಲಕ ಉದ್ಯೋಗ, ಶಿಕ್ಷಣ ಇನ್ನಿತರ ವಿಚಾರಕ್ಕಾಗಿ ಸಂಚಾರ ನಡೆಸುತ್ತಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿಯೂ ಸೋಂಕಿನ ಪ್ರಮಾಣ ಹೆಚ್ಚುವ ಭೀತಿ ಇರುವುದರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ದ.ಕ.ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.