ಮಂಗಳೂರು/ ಹುಬ್ಬಳ್ಳಿ/ ಶಿವಮೊಗ್ಗ/ ಮೈಸೂರು: ರಾಜ್ಯದಲ್ಲಿ ಕೋವಿಡ್ ಅಟ್ಟಹಾಸ ಮುಂದುವರೆದಿದೆ. ಸೋಂಕಿಗೆ ಕಡಿವಾಣ ಹೇರಲು ಮೊದಲು ಜನತಾ ಕರ್ಫ್ಯೂ, ಇದೀಗ ರಾಜ್ಯದಲ್ಲಿ ಸೆಮಿ ಲಾಕ್ಡೌನ್ ಜಾರಿಯಲ್ಲಿದೆ. ಮೊದಲನೇ ಅಲೆಯಲ್ಲೇ ತತ್ತರಿಸಿದ್ದ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಈಗ ಗಾಯದ ಮೇಲೆ ಬರೆ ಎಳೆದ ಪರಿಸ್ಥಿತಿ ಎದುರಾಗಿದೆ.
ಹೌದು, ನಮ್ಮ ಜೀವನ ತುಂಬಾ ಕಷ್ಟದಲ್ಲಿದೆ ಎಂದು ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಮೈಸೂರು ಜಿಲ್ಲೆಯ ಆಟೋ ಮತ್ತು ಕ್ಯಾಬ್ ಚಾಲಕರು ಅಳಲು ತೋಡಿಕೊಳ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 5 ಸಾವಿರದಷ್ಟು ರಿಕ್ಷಾ ಚಾಲಕರು ಮತ್ತು 1 ಸಾವಿರದಷ್ಟು ಕ್ಯಾಬ್ ಚಾಲಕರಿದ್ದಾರೆ. ಮೊದಲ ಅಲೆಯಿಂದ ಸುಧಾರಿಸಿಕೊಳ್ಳುತ್ತಿದ್ದ ಇವ್ರಿಗೆ ಕೋವಿಡ್ ತಂದಿಟ್ಟ ಸಂಕಷ್ಟ ಅಷ್ಟಿಷ್ಟಲ್ಲ.
ಬದುಕು ಸಾಗಿಸಲು ಹಣಕಾಸು ಹೊಂದಿಸಲಾಗದೆ ಜನತಾ ಕರ್ಫ್ಯೂ, ಲಾಕ್ಡೌನ್ ಹೊಡೆತಕ್ಕೆ ಸಿಲುಕಿರುವ ಹುಬ್ಬಳ್ಳಿ ಆಟೋ ಮತ್ತು ಕ್ಯಾಬ್ ಚಾಲಕರದ್ದು ಇದೇ ದುಸ್ಥಿತಿ. ಕಳೆದ ವರ್ಷ ಸರ್ಕಾರ 5,000 ರೂ. ಪರಿಹಾರ ನೀಡುವುದಾಗಿ ಹೇಳಿದ್ದು, ಈವರೆಗೆ ಎಲ್ಲರಿಗೂ ತಲುಪಿಲ್ಲ. ನಾವು ಮಾಡಿರುವ ಸಾಲದ ಹಣವನ್ನು ಮರಳಿಸೋದಾದ್ರೂ ಹೇಗೆ? ಎಂದು ಕ್ಯಾಬ್ ಚಾಲಕರು ಹೇಳುತ್ತಾರೆ.
ಇನ್ನು ಮೈಸೂರು, ಶಿವಮೊಗ್ಗದ ಪರಿಸ್ಥಿತಿಯೂ ಇದ್ರಿಂದ ಹೊರತಾಗೇನೂ ಇಲ್ಲ. ಮಾರಣಾಂತಿಕ ರೋಗದ ಕಾರಣಕ್ಕೆ ಮೊದಲೇ ಆಟೋ, ಕ್ಯಾಬ್ ಹತ್ತಲು ಭಯ ಪಡುತ್ತಿದ್ದ ಜನ್ರು ಬರುಬರುತ್ತಾ ತಮ್ಮ ಸಂಚಾರವನ್ನೇ ಕಡಿಮೆ ಮಾಡಿದ್ದಾರೆ. ಇದೀಗ ಮತ್ತೆ ಲಾಕ್ಡೌನ್ ಜಾರಿಯಾಗಿದೆ. ಕೋವಿಡ್ ನಿಯಂತ್ರಣಕ್ಕೆ ಬರೋವರೆಗೂ ಹಲವು ನಿಯಮಗಳನ್ನು ಸರ್ಕಾರ ರೂಪಿಸಲಿದೆ ಎನ್ನಲಾಗ್ತಿದೆ. ಇವೆಲ್ಲ ಕಾರಣಗಳಿಂದಾಗಿ ಆಟೋ ಮತ್ತು ಕ್ಯಾಬ್ ಚಾಲಕರು ಹೈರಾಣಾಗಿದ್ದಾರೆ.
ಕೋವಿಡ್ ಸಾವು ನೋವು ನಿಯಂತ್ರಣಕ್ಕೆ ಬರೋವರೆಗೂ ಇವರ ಸಮಸ್ಯೆ ನಿವಾರಣೆಯಾಗದು. ಆಟೋ, ಕ್ಯಾಬ್ ಚಾಲಕರಷ್ಟೇ ಅಲ್ಲ, ಕೋವಿಡ್ ಹೊಡೆತಕ್ಕೆ ಸಿಲುಕಿರುವ ಪ್ರತಿ ಕ್ಷೇತ್ರಗಳೂ, ಪ್ರತಿಯೊಬ್ಬರ ಜೀವನ ನಿರ್ವಹಣೆಗೆ ಸಂಕಷ್ಟದಲ್ಲಿದೆ. ಹಾಗಾಗಿ ಸೋಂಕು ನಿಯಂತ್ರಣಕ್ಕೆ ಸರ್ವರೂ ಸನ್ನದ್ಧರಾಗಬೇಕಿದೆ.