ಮಂಗಳೂರು: ಕೊರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈವರೆಗೆ 20 ಸಾವಿರ ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.
ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಯಾವುದೇ ಶಂಕಿತ ಪ್ರಕರಣ ಪತ್ತೆಯಾಗಿಲ್ಲ. ಕೊರೊನಾ ಚೀನಾದಲ್ಲಿ ಆತಂಕಕ್ಕೆ ಕಾರಣವಾದ ಬಳಿಕ ಮಂಗಳೂರು ಏರ್ಪೋರ್ಟ್ನಲ್ಲಿ ಪ್ರತಿದಿನ 500ರಿಂದ 600 ಜನ ಕೊರೊನಾ ಸೋಂಕಿತ ದೇಶದಿಂದ ಬಂದವರನ್ನು ತಪಾಸಣೆ ಮಾಡಲಾಗಿದೆ.
ಈವರೆಗೆ 20 ಸಾವಿರ ಮಂದಿ ತಪಾಸಣೆಗೊಳಗಾಗಿದ್ದಾರೆ. ಹಡಗಿನಲ್ಲಿ ವಿದೇಶದಿಂದ ಬರುವ ಪ್ರವಾಸಿಗರನ್ನೂ ತಪಾಸಣೆ ಮಾಡಲಾಗುತ್ತಿದೆ. ಕೊರೊನಾ ಚೀನಾದಲ್ಲಿ ಕಾಣಿಸಿಕೊಂಡ ತಕ್ಷಣ ಮಂಗಳೂರಿನಲ್ಲಿ ಕೊರೊನಾ ಶಂಕಿತರಿಗೆ ಪ್ರತ್ಯೇಕ ವಾರ್ಡ್ ತೆರೆಯಲಾಗಿದ್ದು, ಯಾವುದೇ ಸೋಂಕಿತರ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈವರೆಗೆ ಯಾವುದೇ ಸೋಂಕಿತರು ಪತ್ತೆಯಾಗಿಲ್ಲ ಎಂದು ತಿಳಿಸಿದರು.