ಮಂಗಳೂರು: ಇಲ್ಲಿನ ಮಳಲಿ ಮಸೀದಿ ವಿವಾದ ಇನ್ನೂ ಮುಂದುವರೆದಿದ್ದು, ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ಈ ಸಂಬಂಧದ ಆದೇಶವನ್ನು ಮತ್ತೆ ಮುಂದೂಡಿದೆ. ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿ ಕಲಾಪವನ್ನು ನ.9ಕ್ಕೆ ಮುಂದೂಡಿದೆ.
ನಗರದ ಹೊರವಲಯದ ಗಂಜಿಮಠ ಬಳಿಯ ಮಳಲಿ ಮಸೀದಿಯ ನವೀಕರಣ ಕಾಮಗಾರಿ ಸಂದರ್ಭದಲ್ಲಿ ಹಿಂದೂ ಶೈಲಿಯ ದೇವಾಲಯ ಪತ್ತೆಯಾಗಿತ್ತು. ಬಳಿಕ ವಿ ಹೆಚ್ ಪಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ಮಸೀದಿ ಆಡಳಿತ ಮಂಡಳಿ ಅರ್ಜಿ ಹಾಕಿ, ಈ ವಿಚಾರ ವಕ್ಫ್ ಟ್ರಿಬ್ಯುನಲ್ಗೆ ಬರುವುದೆಂದು ವಾದಿಸಿತ್ತು. ಈ ಬಗ್ಗೆ ವಾದ- ವಿವಾದ ಆಲಿಸಿದ ನ್ಯಾಯಾಲಯ ತೀರ್ಪು ಇಂದು ಪ್ರಕಟಿಸಬೇಕಿತ್ತು. ಆದರೆ ಇಂದು ಮಂಗಳೂರು ಸಿವಿಲ್ ಕೋರ್ಟ್ ತೀರ್ಪನ್ನು ನವೆಂಬರ್ 9 ಕ್ಕೆ ಮುಂದೂಡಿಕೆ ಮಾಡಿದೆ.
ಈ ವಿಚಾರದಲ್ಲಿ ಮೂರನೇ ಬಾರಿ ನ್ಯಾಯಾಲಯದ ತೀರ್ಪು ಮುಂದೂಡಿಕೆಯಾಗಿದೆ. 2022ರ ಎಪ್ರಿಲ್ನಲ್ಲಿ ಮಳಲಿ ಮಸೀದಿ ನವೀಕರಣದ ವೇಳೆ ಕಟ್ಟಡ ಕೆಡವಿದ ಸಂದರ್ಭ ಹಿಂದೂ ಶೈಲಿಯ ಮರದ ಕೆತ್ತನೆ ಪತ್ತೆಯಾಗಿತ್ತು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಪೊಲೀಸ್ ನಿಯೋಜನೆ ಮಾಡಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ: ಮಳಲಿ ವಿವಾದ: ಮಸೀದಿ ಹೆಸರು ನಮೂದಿಗೆ ತಡೆಯಾಜ್ಞೆ
ಹಿಂದೂ ಸಂಘಟನೆಗಳು ಮಧ್ಯಪ್ರವೇಶಿಸಿ ಮಸೀದಿ ಇರುವ ಸ್ಥಳದ ಬಗ್ಗೆ ತಾಂಬೂಲ ಪ್ರಶ್ನಾ ಚಿಂತನೆ ಇರಿಸಿದ್ದವು. ತಾಂಬೂಲ ಪ್ರಶ್ನೆಯಲ್ಲಿ ಮಸೀದಿಯಲ್ಲಿ ಈ ಹಿಂದೆ ಗುರುಸಾನಿಧ್ಯ ಇದ್ದ ಬಗ್ಗೆ ಗೋಚರವಾಗಿತ್ತು. ಆ ಬಳಿಕ ಈ ವಿಚಾರದಲ್ಲಿ ವಿಎಚ್ ಪಿ ಕಾನೂನು ಸಮರ ನಡೆಸಲು ನಿರ್ಧರಿಸಿ ಕೋರ್ಟ್ ಮೆಟ್ಟಿಲೇರಿತ್ತು.
2022 ಮೇ ತಿಂಗಳಿನಿಂದ ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ಮಳಲಿ ಮಸೀದಿ ವಿಚಾರದಲ್ಲಿ ವಿಚಾರಣೆ ನಡೆಯುತ್ತಿದೆ. ಸೆ.27ರಂದು ತೀರ್ಪು ಹೊರಬೀಳಬೇಕಿತ್ತು. ಆದರೆ ಅ.17ಕ್ಕೆ ತೀರ್ಪನ್ನು ಕೋರ್ಟ್ ಮುಂದೂಡಿತ್ತು. ಇಂದು ತೀರ್ಪನ್ನು ನವೆಂಬರ್ 9 ಕ್ಕೆ ಮುಂದೂಡಲಾಗಿದೆ.