ಮಂಗಳೂರು: ಇಲ್ಲಿನ ಕಾರ್ಸ್ಟ್ರೀಟ್ನಲ್ಲಿರುವ ನವಭಾರತ ರಾತ್ರಿ ಪ್ರೌಢಶಾಲೆ ಸಾವಿರಾರು ಮಕ್ಕಳ ಕಲಿಕೆಗೆ ವೇದಿಕೆ ಕಲ್ಪಿಸಿದ ವಿದ್ಯಾದೇಗುಲ. ಈ ರಾತ್ರಿ ಪ್ರೌಢಶಾಲೆ 1943 ಮಾರ್ಚ್ 15 ರಂದು ಆರಂಭವಾಯಿತು. ದೇಶಕ್ಕೆ ಸ್ವಾತಂತ್ರ್ಯ ಸಿಗುವ ಪೂರ್ವದಲ್ಲಿ ಹಾಜಿ ಖಾಲಿದ್ ಮೊಹಮ್ಮದ್ ಎಂಬುವರು ಈ ಶಾಲೆಯನ್ನು ಆರಂಭಿಸಿದರು.
ಆ ಕಾಲದಲ್ಲಿ ಶಾಲೆಗೆ ಹೋಗಲಾಗದವರಿಗೆ ರಾತ್ರಿ ಶಾಲೆಯನ್ನು ಆರಂಭಿಸಿ ವಿದ್ಯೆಯನ್ನು ನೀಡಲಾಯಿತು. 1943 ಕ್ಕೆ ಐದು ಮಂದಿ ವಯಸ್ಕ ವಿದ್ಯಾರ್ಥಿಗಳಿಗೆ ಕನ್ನಡ ಪಾಠದ ಶಿಕ್ಷಣ ನೀಡುವ ಮೂಲಕ ಆರಂಭವಾದ ನವಭಾರತ ಪ್ರೌಢಶಾಲೆ, ಇದೀಗ 80 ನೇ ವರ್ಷದತ್ತ ಸಾಗುತ್ತಿದೆ. ಇದು ದೇಶದಲ್ಲಿ ಆರಂಭವಾದ ಮೊದಲ ರಾತ್ರಿ ಪ್ರೌಢಶಾಲೆಯಾಗಿದೆ.
ಹಗಲಿನಲ್ಲಿ ಕೆಲಸಕ್ಕೆ ಹೋಗಿ ರಾತ್ರಿ ಕಲಿಯಲು ಆಸಕ್ತಿ ಇರುವವರಿಗೆ ಆರಂಭಿಸಲಾದ ರಾತ್ರಿ ಪ್ರೌಢಶಾಲೆಯಲ್ಲಿ ಈಗಾಗಲೇ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ್ದಾರೆ. ಶಾಲೆಗೆ ಹೋಗಲಾಗದವರು, ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿದವರು. ಎಸ್ಎಸ್ಎಲ್ಸಿ ಯನ್ನು ಪೂರೈಸಬೇಕೆಂಬ ಇಚ್ಚೆಯುಳ್ಳವರು ಈ ರಾತ್ರಿ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾರೆ.
ಸೀಮಿತ ವಿದ್ಯಾರ್ಥಿಗಳನ್ನು ಇಟ್ಟುಕೊಂಡು ರಾತ್ರಿ ಪ್ರೌಢಶಾಲೆಯನ್ನು ಮುನ್ನಡೆಸುವುದು ತ್ರಾಸದಾಯಕ. ನವಭಾರತ ರಾತ್ರಿ ಪ್ರೌಢಶಾಲೆಯ ಬಳಿಕ ಮುಂಬಯಿನಲ್ಲಿ ಆರಂಭವಾಗಿದ್ದ ರಾತ್ರಿ ಪ್ರೌಢಶಾಲೆಗೆ ಆರ್ಥಿಕ ಸಮಸ್ಯೆ ಎದುರಾಗಿ ಮುಚ್ಚಿಹೋಗಿತ್ತು. ನವಭಾರತ ಪ್ರೌಢಶಾಲೆಯ 60 ನೇ ವರ್ಷಾಚರಣೆ ಸಂದರ್ಭದಲ್ಲಿ ಉದ್ಯಮಿ ವಿನಯ ಹೆಗ್ಡೆಯವರು ನೀಡಿದ ಭರವಸೆಯಂತೆ ಶಿಕ್ಷಕರ ವೇತನದ ವೆಚ್ಚವನ್ನು ಈವರೆಗೂ ಅವರ ಸಂಸ್ಥೆಯಿಂದ ನೀಡಲಾಗುತ್ತಿದೆ. ಈ ಕಾರಣದಿಂದ ಈ ಸಂಸ್ಥೆ ಎದುರಿಸುತ್ತಿದ್ದ ಆರ್ಥಿಕ ಸಂಕಷ್ಟದಿಂದ ಚೇತರಿಸುವಂತಾಗಿದೆ. 2005 ರಿಂದ ಈ ಪ್ರೌಢಶಾಲೆಯಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಈ ಸಂಸ್ಥೆಯ ಉಳಿವಿಗೆ ಇನ್ನಷ್ಟು ಮಂದಿಯ ನೆರವನ್ನು ಸಂಸ್ಥೆ ನಿರೀಕ್ಷಿಸುತ್ತಿದೆ.
ಇದನ್ನೂ ಓದಿ: ಮೋದಿಯವರು ಯೋಗ ಮಾಡುವ ವೇದಿಕೆ ರಾಜಕೀಯ ವೇದಿಕೆಯಲ್ಲ: ಪ್ರತಾಪ್ ಸಿಂಹ
ಇಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಜೊತೆಗೆ ಆಸಕ್ತರಿಗೆ ಟ್ಯೂಷನ್, ಯಕ್ಷಗಾನ, ಯೋಗ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ಹಗಲು ಬೇರೆ ಶಾಲೆಗೆ ಹೋಗುವ ಮಕ್ಕಳು ಇಲ್ಲಿಗೆ ರಾತ್ರಿ ಕಲಿಯಲು ಬರುತ್ತಿದ್ದಾರೆ. ಈ ಶಾಲೆಯಲ್ಲಿ ಗಂಡ- ಹೆಂಡತಿ ಮತ್ತು ಅವರ ಮಗು ಒಟ್ಟಿಗೆ ಕಲಿತ ಇತಿಹಾಸವಿದೆ. ಈ ಪ್ರೌಢಶಾಲೆಯ ಸ್ಥಾಪಕರಾದ ಹಾಜಿ ಖಾಲಿದ್ ಮೊಹಮ್ಮದ್ ಅವರಿಗೆ 2023ಕ್ಕೆ ನೂರು ವರ್ಷ ತುಂಬುವುದರಿಂದ ಮತ್ತು ಶಾಲೆಗೆ 80 ವರ್ಷ ತುಂಬುವುದರಿಂದ ಸಂಭ್ರಮಾಚರಣೆ ಮಾಡಲು ಸಂಸ್ಥೆ ಆಡಳಿತ ಮಂಡಳಿ ನಿರ್ಧರಿಸಿದೆ.