ಮಂಗಳೂರು (ದಕ್ಷಿಣ ಕನ್ನಡ) : ಮುಂದಿನ ವರ್ಷ ದೇಶ ಯೂರಿಯಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲಿದೆ ಎಂದು ಕೇಂದ್ರ ರಾಸಾಯನಿಕ, ರಸ ಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ರಾಜ್ಯ ಸಚಿವ ಭಗವಂತ ಖೂಬ ಹೇಳಿದ್ದಾರೆ.
ನಗರದ ಹೊರವಲಯದ ಗಂಜಿಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ಲಾಸ್ಟಿಕ್ ಪಾರ್ಕ್ನ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಖೂಬಾ, ದೇಶದಲ್ಲಿ ಈಗಾಗಲೇ 5 ಯೂರಿಯಾ ಉತ್ಪಾದನಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಮುಂದಿನ ವರ್ಷ 6ನೇ ಘಟಕ ಶುರುವಾಗುತ್ತದೆ. ಇದರೊಂದಿಗೆ ಪ್ರತಿ ವರ್ಷ 12.7 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಮಾಡುವ ಮೂಲಕ ದೇಶದ ಅಗತ್ಯದ ಯೂರಿಯಾ ಉತ್ಪಾದನೆಯ ಗುರಿ ಸಾಧನೆಯೊಂದಿಗೆ ಸ್ವಾವಲಂಬನೆ ಸಾಧ್ಯವಾಗಲಿದೆ. ಮುಂದಿನ ವರ್ಷ ಬೇಡಿಕೆ ಇರುವ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ರೈತರಿಗೆ ಒದಗಿಸಲಾಗುವುದು ಎಂದು ತಿಳಿಸಿದರು.
ಮುಂದಿನ ಏಪ್ರಿಲ್ನಲ್ಲಿ ಲೋಕಸಭೆ ಚುನಾವಣೆ ಬರಲಿದೆ. ಆದ್ದರಿಂದ ಜನವರಿಯೊಳಗೆ ಕಾಮಗಾರಿ ಉದ್ಘಾಟನೆಯಾಗಬೇಕು. ಪ್ರತಿ ತಿಂಗಳು ಯೋಜನೆಯ ಮಾಹಿತಿಯನ್ನು ನಾನು ಪಡೆಯುತ್ತಿರುತ್ತೇನೆ. ಭೂಸ್ವಾಧೀನಕ್ಕೆ ಆಗಿರುವ ತೊಡಕುಗಳನ್ನು ಶೀಘ್ರ ನಿವಾರಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ಲಾಸ್ಟಿಕ್ ಪಾರ್ಕ್ ಕಟ್ಟಡ ಕಾಮಗಾರಿ ಪ್ರಗತಿಯ ಹಂತದಲ್ಲಿದೆ. 104 ಎಕರೆ ಪ್ರದೇಶದಲ್ಲಿ ಪ್ಲಾಸ್ಟಿಕ್ ಉತ್ಪಾದನೆಯ ಘಟಕಗಳು ನಿರ್ಮಾಣವಾಗಲಿದೆ. ಸಿಪೆಟ್ ಕಾಲೇಜು ಕೂಡಾ ಈ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಡಿಸೆಂಬರ್‌ನೊಳಗೆ ಈ ಪ್ರದೇಶದಲ್ಲಿ ರಸ್ತೆ, ಒಳಚರಂಡಿ, ವಿದ್ಯುತ್, ಕಾಲೇಜು ಬಿಲ್ಡಿಂಗ್ ನಿರ್ಮಾಣವಾಗಲಿದೆ. ಆದರೆ ಸಮಾಧಾನಕಾರವಾದ ಪ್ರಗತಿಯಾಗಿಲ್ಲ. 70 ಪ್ರತಿಶತವಾದರೂ ಕಾಮಗಾರಿ ನಡೆಯಬೇಕಿತ್ತು.
ಆದರೆ ಕೇವಲ 15% ಮಾತ್ರ ಕಾಮಗಾರಿ ನಡೆದಿದೆ. ಸಮಸ್ಯೆಗಳೇನೇ ಇದ್ದರೂ ಅಗತ್ಯ ಇಂಜಿನಿಯರ್ಗಳನ್ನು ನಿಯೋಜನೆ ಮಾಡಿ, ಗುತ್ತಿಗೆದಾರರಲ್ಲಿರುವ ಮಾನವಶಕ್ತಿ ಯಂತ್ರದ ಬಗ್ಗೆ ನಿಮಗೆ ಅರಿವಿದ್ದರೆ ಮಾತ್ರ ಕಾಮಗಾರಿ ಪ್ರಗತಿಯಲ್ಲಿ ನಡೆಯಲಿದೆ. ಮುಂದೆ ಕೆಲಸ ತ್ವರಿತಗತಿಯಲ್ಲಿ ನಡೆಯಬೇಕು. ಬೆಂಗಳೂರು ನಲ್ಲಿ ಕೂತರೆ ಕಾಮಗಾರಿ ವೇಗ ನಡೆಯೋದಿಲ್ಲ ಎಂದು ಚೀಫ್ ಇಂಜಿನಿಯರ್ ವೀರಭದ್ರಯ್ಯ ಅವರಿಗೆ ಭಗವಾನ್ ಖೂಬಾ ಸಲಹೆ ಕೊಟ್ಟರು.
ಕೇಂದ್ರದಲ್ಲಿ ನಾನು ಮಂತ್ರಿಯಾಗಲು ಸಂಸದ ನಳೀನ್ ಕುಮಾರ್ ಕಟೀಲ್ ಕಾರಣ. ಹಾಗಾಗಿ ಅವರಿಗೆ ಮಂಗಳೂರಿಗೆ ಉಪಯುಕ್ತವಾದ ಯೋಜನೆಯನ್ನು ನೀಡಿದ್ದೇನೆ. ಈ ಯೋಜನೆ ಮಂಗಳೂರಿಗೆ ಬರಲು ಮುಖ್ಯ ಕಾರಣ ನಳೀನ್ ಕುಮಾರ್ ಕಟೀಲ್. ಮಂಗಳೂರಿನಲ್ಲಿ ಎಲ್ಲಾ ಯೋಜನೆಗಳು ಯಶಸ್ವಿಯಾಗುತ್ತದೆ. ಆತ್ಮನಿರ್ಭರ ಭಾರತದ ಮೂಲೋದ್ದೇಶ ದಿಂದ ಭಾರತದಲ್ಲೇ ವಸ್ತುಗಳು ಉತ್ಪಾದನೆಯಾಗಲಿದೆ ಎಂದು ಸಚಿವ ಭಗವಂತ ಖೂಬಾ ತಿಳಿಸಿದರು.
ಸಂಸದ ನಳೀನ್ ಕುಮಾರ್ ಕಟೀಲ್ ಮಾತನಾಡಿ, ಈ ಪ್ಲಾಸ್ಟಿಕ್ ಪಾರ್ಕ್ ದ.ಕ ಜಿಲ್ಲೆಗೆ ಬರಲು ಅನಂತ್ ಕುಮಾರ್ ಕಾರಣ. ಬಳಿಕ ಈ ಪಾರ್ಕ್ ಕೈ ತಪ್ಪಿ ಹೋಗುವ ಸಂದರ್ಭದಲ್ಲಿ ಭಗವಂತ್ ಖೂಬಾ ಕೈ ಹಿಡಿದರು. ನಿಧಾನಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಗೆ ಅನುದಾನಗಳನ್ನು ಖೂಬಾ ನೀಡಿದ್ದಾರೆ. ಸದ್ಯ ಎರಡನೇ ಹಂತದ ಅನುದಾನ ಬಿಡುಗಡೆಯಾಗಿದೆ. ಈ ಕಾಮಗಾರಿ ಜನವರಿ ಒಳಗೆ ಉದ್ಘಾಟನೆಯಾಗಲಿದೆ. ಯುವಕರಿಗೆ ಈ ಪಾರ್ಕ್ ನಿಂದ ಉದ್ಯೋಗ ಸೃಷ್ಠಿಯಾಗಲಿದೆ ಎಂದರು.
ಇದನ್ನೂ ಓದಿ : ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ನಾಳೆ ಪ್ರಧಾನಿ ಮೋದಿ ಬೆಂಗಳೂರಿಗೆ: ಬಿಗಿ ಪೊಲೀಸ್ ಬಂದೋಬಸ್ತ್