ಬೆಂಗಳೂರು/ಮಂಗಳೂರು: ಸರಕು ಸಾಗಣೆ ಹಡಗು ಮುಳುಗಿ ಸಮುದ್ರದಲ್ಲಿ ಸಿಲುಕಿದ ಆರು ಜನರನ್ನು ಕರಾವಳಿ ಕಾವಲು ಪಡೆಯ ಸಿಬ್ಬಂದಿ ರಕ್ಷಿಸಿದ್ದಾರೆ.
ನಿನ್ನೆ ತಡರಾತ್ರಿ ಸಾಫಿನಾ ಅಲ್ ಮಿರ್ಜಾನ್ ಹಡಗು ನಗರದ ಬದರಿನಿಂದ ಮಸಾಲೆ ಪದಾರ್ಥಗಳು, ಆಹಾರ ಧಾನ್ಯಗಳು, ತರಕಾರಿ, ಮರಳು ಹಾಗೂ ಗ್ರಾನೈಟ್ ತೆಗೆದುಕೊಂಡು ಲಕ್ಷದ್ವೀಪಕ್ಕೆ ತೆರಳುತ್ತಿತ್ತು.ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಹಡಗಿನ ಎಂಜಿನ್ ರೂಮ್‌ಗೆ ನೀರು ನುಗ್ಗಿದೆ. ಕಾಸರಗೋಡಿನಿಂದ 40 ನಾಟಿಕಲ್ ಮೈಲಿ ದೂರದಲ್ಲಿ ಹಡಗು ಮುಳುಗಡೆಯಾಗಿತ್ತು.
ಹಡಗಿನಲ್ಲಿದ್ದ ಆರು ಜನರು ಸಮುದ್ರದ ಮಧ್ಯೆ ಸಿಲುಕಿದ್ದರು. ಹಡಗು ಮುಳುಗಡೆಯಾಗಿರುವ ಬಗ್ಗೆ ಮಾಹಿತಿ ಪಡೆದ ಕರಾವಳಿ ಕಾವಲು ಪಡೆ ಅಧಿಕಾರಿಗಳು ಕೂಡಲೇ, ಸಿಜಿ ವಿಮಾನವನ್ನು ಸ್ಥಳಕ್ಕೆ ಕಳುಹಿಸಿದ್ದರು. ಸಮುದ್ರದಲ್ಲಿ ಸಿಲುಕಿದ್ದ ಆರು ಜನರನ್ನು ಪತ್ತೆ ಮಾಡಿದ ಸಿಬ್ಬಂದಿ, ಹಗ್ಗವನ್ನು ಬಿಟ್ಟು ಆರು ಜನರನ್ನು ರಕ್ಷಿಸಿದ್ದಾರೆ. ಸಮುದ್ರದಲ್ಲಿ ನಿಗಾ ವಹಿಸಿದ್ದ ಕರಾವಳಿ ಕಾವಲು ಪಡೆಯ ಹಡಗು ಸ್ಥಳಕ್ಕೆ ಬಂದು, ಆರು ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಘಟನೆ ಬಗ್ಗೆ ಮಾಹಿತಿ ಸಿಕ್ಕಿದ ಬಳಿಕ ಕೇವಲ ಒಂದು ಗಂಟೆಯಲ್ಲಿಯೇ ಸ್ಥಳಕ್ಕೆ ಆಗಮಿಸಿ, ಗುಜರಾತ್ ಮೂಲದ ಐದು ಮಂದಿ ಹಾಗೂ ಮಂಗಳೂರಿನ ಒಬ್ಬ ವ್ಯಕ್ತಿಯನ್ನು ರಕ್ಷಿಸಲಾಗಿದೆ. ಬಳಿಕ, ಅವರನ್ನು ನವ ಮಂಗಳೂರು ಬಂದರಿಗೆ ಕರೆತರಲಾಗಿದೆ. ಈ ಬಗ್ಗೆ ಕರಾವಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.