ಮಂಗಳೂರು: ಪಚ್ಚನಾಡಿ ಡಂಪಿಂಗ್ ಯಾರ್ಡ್ ಹಾಗೂ ಯುಜಿಡಿ ವಿಚಾರದಲ್ಲಿ ಮಂಗಳೂರು ಮಹಾನಗರ ಪಾಲಿಕೆಯಿಂದ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ಪಚ್ಚನಾಡಿ ಡಂಪಿಂಗ್ ಯಾರ್ಡ್ ಅಭಿವೃದ್ಧಿಗಾಗಿ ಬಳಕೆ ಮಾಡದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಬೇರೆ ಉದ್ದೇಶಗಳಿಗೆ ಬಳಸಿದೆ. ಅದೇ ಇಂದಿನ ಮಂದಾರ ಪ್ರದೇಶದ ದುರಂತಕ್ಕೆ ಕಾರಣ ಎಂದು ಮಂಗಳೂರು ಉತ್ತರ ಶಾಸಕ ಡಾ. ವೈ.ಭರತ್ ಶೆಟ್ಟಿ ಆರೋಪಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಡಂಪಿಂಗ್ ಯಾರ್ಡ್ನಲ್ಲಿ ಸಮಸ್ಯೆಗಳಿವೆ. ಮುಂದೆ ದುರಂತ ಆಗುವ ಸಂಭವವಿದೆ. ಆದ್ದರಿಂದ ಶೀಘ್ರ ತಡೆಗೋಡೆ ನಿರ್ಮಾಣ ಆಗಬೇಕೆಂದು ಆರೋಗ್ಯ ವಿಭಾಗ ವರದಿ ಕೊಟ್ಟಿದ್ದರೂ ಅದನ್ನು ನಿರ್ಲಕ್ಷ್ಯ ಮಾಡಿದ ಮ.ನ.ಪಾ ಕಾಂಗ್ರೆಸ್ ಸರ್ಕಾರವೇ ಈ ದುರಂತಕ್ಕೆ ಸಂಪೂರ್ಣ ಕಾರಣ ಎಂದು ದೂರಿದರು.
ಕಸ ವಿಲೇವಾರಿ ಮಾಡಲು ಆ್ಯಂಟನಿ ವೇಸ್ಟ್ ಮ್ಯಾನೇಜ್ಮೆಂಟ್ನೊಂದಿಗೆ ಒಪ್ಪಂದ ಆಗಿದೆ. ಆದರೆ ಅಂದು ಒಪ್ಪಂದ ಆದಾಗ ಪಾಲಿಕೆ ಹೇಳಿದ ಷರತ್ತುಗಳು ಸರಿಯಾಗಿ ಪಾಲನೆಯಾಗುತ್ತಿಲ್ಲ. ನಿರೀಕ್ಷೆಗಿಂತ ಅತಿಯಾದ ತ್ಯಾಜ್ಯ ಪಚ್ಚನಾಡಿಯಲ್ಲಿ ಡಂಪ್ ಆಗುತ್ತಿದೆ ಎಂದರು.
ಯುಜಿಡಿ ವಿಚಾರಲ್ಲಿ ನಮ್ಮ ಸುರತ್ಕಲ್ ಕ್ಷೇತ್ರಕ್ಕೆ ಬಹಳಷ್ಟು ಸಮಸ್ಯೆಗಳಾಗಿವೆ. 306 ಕೋಟಿ ರೂ.ನಲ್ಲಿ ಅಂಡರ್ ಗ್ರೌಂಡ್ ಡ್ರೈನೇಜ್ ರಚಿಸಲಾಗುವುದು ಎಂದು ಹೇಳಿದ್ದರು. ಆದರೆ ಬಹುದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ. ಆದ್ದರಿಂದ ಯುಜಿಡಿ ಸಂಪೂರ್ಣ ವಿಫಲವಾಗಿದೆ. ಅಂದಿನ ಕಾಂಗ್ರೆಸ್ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಅವರು ಇದರಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಭರತ್ ಶೆಟ್ಟಿ ಆರೋಪಿಸಿದರು.