ಮಂಗಳೂರು: ಮನಪಾದ ಹೊಸಬೆಟ್ಟು ವಾರ್ಡ್ನ ಕಾರ್ಪೊರೇಟರ್ ವರುಣ್ ಚೌಟ ಅವರು ಇಂದು ಸಾಮಾನ್ಯ ಸಭೆಯಲ್ಲಿ ತುಳುಧ್ವಜದ ಶಾಲು ಧರಿಸಿ ಎಲ್ಲರ ಗಮನ ಸೆಳೆದರು. ಅಲ್ಲದೆ ತುಳುಲಿಪಿಯಲ್ಲಿ ಮನಪಾ ಬೋರ್ಡ್ ಅನ್ನು ಹಾಕುವಂತೆ ಬೇಡಿಕೆಯಿರಿಸಿದ್ದಾರೆ.
ಈ ಬಗ್ಗೆ ಮಂಗಳೂರು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಅವರಿಗೆ ಮನವಿ ನೀಡಿರುವ ಅವರು, ತುಳುಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಆಗ್ರಹ ಬಹಳಷ್ಟು ಕಾಲದಿಂದ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಯಾವುದೇ ಬೆಳವಣಿಗೆ ನಡೆದಿಲ್ಲ. ಆದ್ದರಿಂದ ಮನಪಾ ವತಿಯಿಂದ ಈ ವಿಚಾರವಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕೆಂದು ಕೋರಿದ್ದಾರೆ.
ಅಲ್ಲದೆ ರಾಜ್ಯ ಸರ್ಕಾರದ ವಿಶೇಷ ಅನುಮತಿ ಪಡೆದು ಮಂಗಳೂರು ಮನಪಾ ಮುಖ್ಯ ನಾಮಫಲಕದಲ್ಲಿ, ಪುರಭವನದಲ್ಲಿ, ಉಪ ಕಚೇರಿಗಳಲ್ಲಿ ಮನಪಾ ವ್ಯಾಪ್ತಿಯ ಎಲ್ಲಾ ಸರ್ಕಾರಿ ಕಚೇರಿ, ಖಾಸಗಿ ಕಚೇರಿ, ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಲಿಪಿಯ ಜೊತೆಗೆ ತುಳು ಲಿಪಿಯನ್ನು ಕಡ್ಡಾಯವಾಗಿ ಬಳಸಲು ಅವಕಾಶ ನೀಡಬೇಕು ಎಂದು ವರುಣ್ ಚೌಟ ಒತ್ತಾಯಿಸಿದ್ದಾರೆ.