ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ 13ನೇ ಕೊರೊನಾ ಪ್ರಕರಣದ ಹಿನ್ನೆಲೆಯಲ್ಲಿ ಸೋಂಕು ಪೀಡಿತ ವ್ಯಕ್ತಿಯ ಮನೆ ಇರುವ ಪ್ರದೇಶವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ಜಿಲ್ಲೆಯಲ್ಲಿ 13ನೇ ಕೊರೊನಾ ಪ್ರಕರಣ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ಪಾಸಿಟಿವ್ ಇರುವ ವ್ಯಕ್ತಿಯ ಮನೆಗೆ ಮತ್ತು ಸಮೀಪ ಪ್ರದೇಶದ ಮನೆಗಳಿಗೆ ಸಂಪೂರ್ಣ ದಿಗ್ಬಂಧನ ವಿಧಿಸಲಾಗಿದ್ದು, ಈ ವ್ಯಕ್ತಿಯ ನಿಕಟ ಸಂಪರ್ಕದಲ್ಲಿದ್ದ ಸಂಬಂಧಿಕರು ಸೇರಿದಂತೆ ನಿಕಟವರ್ತಿಗಳು ಹೊರ ಜಗತ್ತಿನೊಂದಿಗೆ ಬೆರೆಯದಂತೆ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ಮನೆಯಲ್ಲೇ ಇರುವಂತೆ ಸೂಚನೆ ನೀಡಲಾಗಿದೆ ಎಂದು ಪುತ್ತೂರು ಸಹಾಯಕ ಕಮೀಷನರ್ ಯತೀಶ್ ಉಳ್ಳಾಲ್ರವರು ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ನಿಯಂತ್ರಣ ಪ್ರದೇಶದಿಂದ ಯಾವುದೇ ಕಾರಣಕ್ಕೂ ಯಾರೂ ಹೊರಗೆ ಹೋಗದಂತೆ ಮತ್ತು ಒಳಗೆ ಬಾರದಂತೆ ಭದ್ರತೆ ಮಾಡಲಾಗಿದೆ. ವಾಹನ ಸಂಚಾರಕ್ಕೂ ಅವಕಾಶ ನೀಡದಂತೆ ಪೊಲೀಸರು ಕಾಯಂ ಬ್ಯಾರಿಕೇಡ್‌ಗಳಿಂದ ಇಡೀ ವಲಯವನ್ನು ಪ್ರವೇಶ ಮುಕ್ತ ಮಾಡಿದ್ದಾರೆ. ಅಗತ್ಯ ವೈದ್ಯಕೀಯ ಮತ್ತು ತುರ್ತು ಸಂದರ್ಭಗಳಿಗೆ ಎಮರ್ಜೆನ್ಸಿ ಪಾಸ್‌ಗಳನ್ನು ಪೊಲೀಸರು ವಿತರಿಸಲಿದ್ದಾರೆ.