ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂದು ಪತ್ರಕರ್ತರಿಬ್ಬರಲ್ಲಿ ಸೋಂಕು ಪತ್ತೆಯಾಗಿದೆ.
ಖಾಸಗಿ ಚಾನಲ್ಗಳ ಕ್ಯಾಮೆರಾಮೆನ್ಗಳಾಗಿರುವ ಇಬ್ಬರಿಗೆ ಮೊನ್ನೆ ಜ್ವರದ ಲಕ್ಷಣ ಕಂಡು ಬಂದಿದ್ದು, ಈ ಹಿನ್ನೆಲೆ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ವರದಿ ಬಂದಿದ್ದು, ಇವರಲ್ಲಿ ಸೋಂಕು ಇರುವುದು ದೃಢಗೊಂಡಿದೆ. ಇದೀಗ ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರ ಆರೋಗ್ಯ ಪರಿಸ್ಥಿತಿಯೂ ಉತ್ತಮವಾಗಿದೆ.
ಕೊರೊನಾ ಪ್ರಕರಣಗಳು ದ.ಕ.ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಂದರ್ಭ ಎಪ್ರಿಲ್ನಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರಿಗೆ ಕೊರೊನಾ ತಪಾಸಣೆ ಮಾಡಲಾಗಿದ್ದು, ಯಾವುದೇ ಪತ್ರಕರ್ತರಲ್ಲಿಯೂ ಸೋಂಕು ಕಂಡು ಬಂದಿರಲಿಲ್ಲ. ಆದರೆ ಇದೀಗ ಜಿಲ್ಲೆಯಲ್ಲಿ ಪತ್ರಕರ್ತರಿಗೆ ಮೊದಲ ಬಾರಿಗೆ ಸೋಂಕು ದೃಢಗೊಂಡಿದೆ.