ಮಂಗಳೂರು: ದ.ಕ.ಜಿಲ್ಲೆಯಲ್ಲಿ ಮತ್ತೋರ್ವ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಇಂದು ಪತ್ತೆಯಾದ ಏಕೈಕ ಕೊರೊನಾ ಪ್ರಕರಣ ಇದಾಗಿದೆ.
ನಗರದ ಫಸ್ಟ್ ನ್ಯೂರೋ ಆಸ್ಪತ್ರೆಯ ಸಿಬ್ಬಂದಿಯಾಗಿರುವ 47 ವರ್ಷದ ಮಹಿಳೆಗೆ ಕೊರೊನಾ ಸೋಂಕು ದೃಢಗೊಂಡ ಹಿನ್ನೆಲೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 19ಕ್ಕೇರಿದೆ. ಬಂಟ್ವಾಳದ ನರಿಕೊಂಬು ಗ್ರಾಮದ ನಿವಾಸಿಯಾಗಿರುವ ಈ ಮಹಿಳೆಗೆ ಏ.21ರಂದು ಮೃತಪಟ್ಟಿದ್ದ ವೃದ್ಧೆಯ ಸಂಪರ್ಕದಿಂದ ಸೋಂಕು ತಗುಲಿದೆ. ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಗೆ ಸೋಂಕು ದೃಢಗೊಂಡ ಬಳಿಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೃದ್ಧೆ ಏಪ್ರಿಲ್ 21 ರಂದು ಮೃತಪಟ್ಟಿದ್ದರು. ಆ ವೃದ್ದೆಯ ಸಂಪರ್ಕದಿಂದ ಸ್ವೀಪರ್ ಕೆಲಸ ಮಾಡುತ್ತಿದ್ದಈ ಮಹಿಳೆಗೂ ಸೋಂಕು ತಗುಲಿದೆ.
ಇನ್ನು ವೃದ್ಧೆ ಮೃತಪಟ್ಟ ತಕ್ಷಣ ಆಸ್ಪತ್ರೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡಿ, ಸಿಬ್ಬಂದಿಯನ್ನು ಮಂಗಳೂರಿನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಬಳಿಕ ಎಲ್ಲರ ಗಂಟಲು ದ್ರವವನ್ನು ಪರೀಕ್ಷೆಗೆ ರವಾನಿಸಲಾಗಿತ್ತು. ಇಂದು ಬಂದ ವರದಿಯಲ್ಲಿ ಸ್ವೀಪರ್ ಕೆಲಸ ಮಾಡುತ್ತಿದ್ದ ಮಹಿಳೆಗೆ ಸೋಂಕು ದೃಢಗೊಂಡಿದೆ. ಇಂದು ಸೋಂಕು ದೃಢಗೊಂಡ ಮಹಿಳೆ ಸೇರಿ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.