ಬಂಟ್ವಾಳ (ದ.ಕ ): ಕೊರೊನಾದಿಂದ ತಾಲೂಕು ಅಕ್ಷರಶಃ ನಲುಗಿ ಹೋಗಿದೆ. ಬಂಟ್ವಾಳ ಪೇಟೆಯನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಣೆ ಮಾಡಲಾಗಿದ್ದು, ಸುಮಾರು 30ಕ್ಕೂ ಅಧಿಕ ಮಂದಿಯನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಬಂಟ್ವಾಳ ಪೇಟೆಯ ಹಿರಿಯ ಮಹಿಳೆಯೊಬ್ಬರು ಕಳೆದ ತಿಂಗಳು ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಅವರ ಸೊಸೆಯೂ ಏ.19 ರಂದು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಹೀಗೆ, ದಾಖಲಾದ ಮಹಿಳೆ ಮರುದಿನವೇ ಆಸ್ಪತ್ರೆಯಲ್ಲಿ ಮೃತಪಟ್ಟಿದರು. ಬಳಿಕ ಬಂದ ವರದಿಯಲ್ಲಿ ಅವರಿಗೆ ಕೊರೊನಾ ತಗುಲಿದ್ದು ದೃಢಪಟ್ಟಿತ್ತು. ಮಹಿಳೆ ಮೃತಪಟ್ಟ ಎರಡು ದಿನಗಳಲ್ಲೇ ಪಕ್ಕದ ಮನೆಯ ವಯಸ್ಸಾದ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿತ್ತು. ಅದಾದ ಎರಡು ದಿನಗಳಲ್ಲಿ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ (ಮೃತ ಮಹಿಳೆಯ ಅತ್ತೆ) ಮೃತಪಟ್ಟರು. ಒಂದೇ ಮನೆಯ ಅತ್ತೆ, ಸೊಸೆ ಕೊರೊನಾಗೆ ಬಲಿಯಾದರು. ಇದು ತಾಲೂಕಿಗೆ ದೊಡ್ಡ ಆಘಾತದ ಸುದ್ದಿಯಾಯಿತು.
ಇದೀಗ ಮೃತ ಮಹಿಳೆಯರ ಪಕ್ಕದ ಮನೆಯ ಯುವತಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಇದು ಬಂಟ್ವಾಳ ಪೇಟೆಯಲ್ಲಿ ನಾಲ್ಕನೇ ಹಾಗೂ ತಾಲೂಕಿನಲ್ಲಿ ಆರನೇ ಕೊರೊನಾ ಪ್ರಕರಣ. ತಾಲೂಕಿನ ಸಜಿಪನಡುವಿನ 10 ತಿಂಗಳ ಮಗು ಕೋವಿಡ್ ಸೋಂಕಿಗೆ ಒಳಗಾಗಿ ಈಗಾಗಲೇ ಗುಣಮುಖವಾಗಿದೆ. ತುಂಬೆಯ ಯುವಕನೊಬ್ಬನೂ ಕೋವಿಡ್ ಮಹಾಮಾರಿಯಿಂದ ಗುಣಮುಖನಾಗಿದ್ದಾನೆ.
ತಾಲೂಕಿನಲ್ಲಿ ಇದುವರೆಗೆ 4 ಮಹಿಳೆಯರು, ಒಬ್ಬ ಪುರುಷ,10 ತಿಂಗಳ ಮಗು ಸೇರಿ 6 ಜನರಿಗೆ ಸೊಂಕು ತಗುಲಿದೆ. ಹೀಗಾಗಿ ತಾಲೂಕಿನಾದ್ಯಂತ ತೀವ್ರ ನಿಗಾವಹಿಸಲಾಗಿದೆ. ಈ ನಡುವೆ ಕಂಟೈನ್ಮೆಂಟ್ ವಲಯದಿಂದ ಒಬ್ಬರು ಮಂಗಳೂರಿಗೆ ಹೋಗಿದ್ದಾರೆ ಎಂಬ ಮಾಹಿತಿಯಿದ್ದು, ಪೊಲೀಸರು ಆ ವ್ಯಕ್ತಿಯ ಹಿಂದೆ ಬಿದ್ದಿದ್ದಾರೆ.