ಮಂಗಳೂರು: ಮೂಡುಬಿದಿರೆಯ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರಾಗಿರುವ ದಂಪತಿಗೆ ಮಹಾಮಾರಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಪೋಷಕರ ರಕ್ಷಣೆಗೆ ಪುತ್ರಿ ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಈ ಶಿಕ್ಷಕ ದಂಪತಿ ವಿದ್ಯಾಗಮ ಯೋಜನೆಯಿಂದ ಹೆಚ್ಚಿನ ಪ್ರದೇಶಗಳಲ್ಲಿ ಸುತ್ತಾಡಿದ್ದು, ಸದ್ಯ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಪತ್ನಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದೀಗ ತಂದೆ-ತಾಯಿಯ ಆರೋಗ್ಯದ ಖರ್ಚು ಭರಿಸಲು ಇವರ ಪುತ್ರಿ (ಪದವಿ ವಿದ್ಯಾರ್ಥಿನಿ) ಪರದಾಡುವ ಸ್ಥಿತಿ ಉಂಟಾಗಿದೆ.
ಶಶಿಕಾಂತ್ ವೈ ಎಂಬುವವರು ಸ್ಥಳೀಯ ಡಿ.ಜೆ. ಅನುದಾನಿತ ಶಾಲಾ ಮುಖ್ಯ ಶಿಕ್ಷಕ. ಪದ್ಮಾಕ್ಷಿ ಎನ್. ಎಂಬುವವರು ಮಕ್ಕಿಯ ಜವಾಹರಲಾಲ್ ನೆಹರೂ ಅನುದಾನಿತ ಪ್ರೌಢ ಶಾಲೆಯ ಶಿಕ್ಷಕಿ. ವಿದ್ಯಾಗಮದ ಕರ್ತವ್ಯಕ್ಕೆ ಹಾಜರಾಗಿದ್ದ ಇಬ್ಬರೂ ಕೂಡ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ ಶಶಿಕಾಂತ್ ಸುಧಾರಿಸಿಕೊಳ್ಳುತ್ತಿದ್ದು, ಪದ್ಮಾಕ್ಷಿ ಕಳೆದ ಸೆ. 29ರಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಆಸ್ಪತ್ರೆಯ ವೆಚ್ಚ ದಿನವೊಂದಕ್ಕೆ ಸರಾಸರಿ 30 ಸಾವಿರ ರೂ. ಅಗುತ್ತಿದೆ. ಈಗಾಗಲೇ 6ರಿಂದ 7 ಲಕ್ಷ ರೂ. ಖರ್ಚಾಗಿದ್ದು ಕುಟುಂಬಸ್ಥರು ಕಂಗಾಲಾಗಿದ್ದಾರೆ.
ಇವರ ಪುತ್ರಿ ಐಶ್ವರ್ಯ ಜೈನ್ ಸ್ಥಳೀಯ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದು, ಇದೀಗ ಹೆತ್ತವರ ಆಸ್ಪತ್ರೆಯ ವೆಚ್ಚ ಭರಿಸಲು ಸಾಧ್ಯವಾಗದೆ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ.`ನನ್ನ ಹೆತ್ತವರು ಕ್ಷೇಮವಾಗಿದ್ದರು. ವಿದ್ಯಾಗಮ ಕರ್ತವ್ಯ ನಿರ್ವಹಿಸಿದ್ದು, ಈಗ ನನ್ನ ಅಮ್ಮನ ಪರಿಸ್ಥಿತಿ ತೀವ್ರ ಚಿಂತಾಜನಕವಾಗಿದೆ. "ನನ್ನ ತಾಯಿಗೇನಾದರು ತೊಂದರೆ ಆದರೆ ಅದಕ್ಕೆ ಸರ್ಕಾರವೇ ಹೊಣೆ" ಎಂದು ಹೆತ್ತ ತಾಯಿಯ ಪರಿಸ್ಥಿತಿ ನೋಡಲಾಗದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್ಥಿಕ ಸಹಾಯಕ್ಕಾಗಿ ಐಶ್ವರ್ಯ ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಸೇರಿದಂತೆ ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ. ಶಾಸಕ, ಸಂಸದರ ಜೊತೆಗೆ ವಿವಿಧ ಇಲಾಖೆಯವರಿಗೂ ಮನವಿ ಮಾಡಿದ್ದಾರೆ. ಈ ಮನವಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಐಶ್ವರ್ಯ ಅವರಿಗೆ ಸ್ಥಳೀಯರಿಂದ ಧೈರ್ಯ ತುಂಬುವ ಕರೆಗಳು ಬರಲಾರಂಭಿಸಿವೆ.
ಇನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಿಕ್ಷಕಿಯ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದ್ದಾರೆ. ಈ ಕುರಿತು ದ.ಕ ಜಿಲ್ಲಾಧಿಕಾರಿಗಳೊಂದಿಗೆ ಕೂಡ ಮಾತನಾಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.