ಪುತ್ತೂರು (ದಕ್ಷಿಣ ಕನ್ನಡ): ಪುತ್ತೂರು ತಾಲೂಕಿನ ಹಲವೆಡೆ ವಿವಿಧ ಇಲಾಖೆಗಳ ಸಿಬ್ಬಂದಿಗೆ ಹಾಗೂ ಅವರಿಂದ ಇತರರಿಗೂ ಕೊರೊನಾ ಸೋಂಕು ಸರಣಿ ಪ್ರಕಾರ ಹರಡುತ್ತಾ ಹೋಗಿದೆ. ಇಲ್ಲಿದೆ ಈ ಬಗ್ಗೆ ಸಂಕ್ಷಿಪ್ತ ಮಾಹಿತಿ.
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಪೊಲೀಸ್ ಕಾನ್ಸ್ಟೇಬಲ್ಗೆ ಮತ್ತು ಅವರ ತಾಯಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಬೆನ್ನಲ್ಲೇ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಪೈಕಿ ನಗರ ಪೊಲೀಸ್ ಠಾಣೆಯ ಇಬ್ಬರಿಗೆ ಮತ್ತು ಮಹಿಳಾ ಪೊಲೀಸ್ ಠಾಣೆಯ ಜೀಪು ಚಾಲಕರೊಬ್ಬರಿಗೆ ಸೋಂಕು ದೃಢಪಟ್ಟಿದೆ.
ಈ ನಡುವೆ ಹೊಸದಾಗಿ ಪುತ್ತೂರು ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗೂ ಕೊರೊನಾ ದೃಢಪಟ್ಟಂತೆ ಪುತ್ತೂರು, ಕಡಬ ಉಭಯ ತಾಲೂಕಿನಲ್ಲಿ 9 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಪುತ್ತೂರು ಪೊಲೀಸರಿಗೆ ಸಂಬಂಧಿಸಿ ಆರಂಭದಲ್ಲಿ ಮಹಿಳಾ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಒಬ್ಬರಿಗೆ ಕೊರೊನಾ ಸೋಂಕು ವಕ್ಕರಿಸಿತ್ತು. ಅದಾದ ಬಳಿಕ ನಗರ ಪೊಲೀಸ್ ಠಾಣೆಯ ಎಸ್ಐ ಜೀಪು ಚಾಲಕನಿಗೆ ವಕ್ಕರಿಸಿದ ಕೊರೊನಾ ಆತನ ಪ್ರಾಥಮಿಕ ಸಂಪರ್ಕದಿಂದ ಮಹಿಳಾ ಪೊಲೀಸ್ ಠಾಣೆಯ ಎಸ್ಐ ಮತ್ತು ಸಿಬ್ಬಂದಿಗೂ ತಗುಲಿದೆ. ಇದೀಗ ಕ್ವಾರಂಟೈನ್‌ನಲ್ಲಿದ್ದವರ ಪೈಕಿ ನಗರ ಪೊಲೀಸ್ ಠಾಣೆಯ 29 ವರ್ಷದ ಪುರುಷ ಮತ್ತು 23 ವರ್ಷದ ಮಹಿಳಾ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಮಹಿಳಾ ಪೊಲೀಸ್ ಸಿಬ್ಬಂದಿ ತಾಯಿಗೆ ಈ ಹಿಂದೆಯೇ ಕೊರೊನಾ ಸೋಂಕು ದೃಢಪಟ್ಟಿತ್ತು. ಅದೇ ರೀತಿ ಮಹಿಳಾ ಪೊಲೀಸ್ ಠಾಣೆಯ ಎಸ್ಐ ಜೀಪು ಚಾಲಕರೊಬ್ಬರಿಗೂ ಕೊರೊನಾ ದೃಢಪಟ್ಟಿದೆ. ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಪೊಲೀಸರು ಸುಬ್ರಹ್ಮಣ್ಯದಲ್ಲಿರುವ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಿದ್ದಾರೆ. ಇವೆಲ್ಲದರ ನಡುವೆ ಹೊಸದಾಗಿ ಪುತ್ತೂರು ಅರಣ್ಯ ಇಲಾಖೆಗೂ ಕಾಲಿಟ್ಟ ಕೊರೊನಾ, ಪುತ್ತೂರು ವಲಯ ಅರಣ್ಯ ಇಲಾಖೆಯ 32 ವರ್ಷದ ಮಹಿಳಾ ಗಾರ್ಡ್ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದ್ದು, ಅವರು ಪುತ್ತೂರು ಸರಕಾರಿ ಅಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮುರ, ಪಡೀಲ್, ಕೋಡಿಂಬಾಳದಲ್ಲೂ ಕೆಲವರಿಗೆ ಸೋಂಕು ಇರುವುದು ದೃಢವಾಗಿದೆ.
ವಿದೇಶದಿಂದ ಆಗಮಿಸಿ ಮಂಗಳೂರಿನಲ್ಲಿ ಕ್ವಾರಂಟೈನ್ ಆಗಿದ್ದ ಕಬಕ ಗ್ರಾ. ಪಂ. ವ್ಯಾಪ್ತಿಯ ಮುರ ನಿವಾಸಿ 63 ವರ್ಷದ ಮಹಿಳೆ, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಉಪ್ಪಿನಂಗಡಿ ಹಳೆ ಬಸ್‌ನಿಲ್ದಾಣದ ಬಳಿಯ 23 ವರ್ಷದ ಯುವಕನಿಗೆ ಕೊರೊನಾ ದೃಢಪಟ್ಟಿದ್ದು, ಅವರು ಮಂಗಳೂರು ಕೋವಿಡ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಗರಸಭೆ ವ್ಯಾಪ್ತಿಯ ಪಡೀಲು ನಿವಾಸಿ 29 ವರ್ಷದ ಮಹಿಳೆಯೊಬ್ಬರಲ್ಲಿ ಕೊರೊನಾ ದೃಢಪಟ್ಟಿದ್ದು, ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಸ್ಕತ್ ನಿಂದ ಜು. 12ರಂದು ಆಗಮಿಸಿ ಮಂಗಳೂರಿನಲ್ಲಿ ಕ್ವಾರಂಟೈನ್‌ನಲ್ಲಿರುವ ಕೋಡಿಂಬಾಳ ನಿವಾಸಿ 59 ವರ್ಷ ವಯಸ್ಸಿನ ವ್ಯಕ್ತಿ ಹಾಗೂ ಅವರ 6 ವರ್ಷದ ಪುತ್ರನಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಅವರು ಮಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.