ಮಂಗಳೂರು: ಮಕ್ಕಳ ಪ್ರಾಜೆಕ್ಟ್ ವರ್ಕ್ಗೆಂದು ನೋಟ್ ಜೆರಾಕ್ಸ್ ಮಾಡಿ ಚಲಾಯಿಸಿದ ಅಪರಾಧಿಗೆ ಮಂಗಳೂರಿನ 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾಲ್ಕು ವರ್ಷಗಳ ಸಜೆ ವಿಧಿಸಿದೆ. ಬಂಟ್ವಾಳದ ಇರಾ ಗ್ರಾಮದ ದರ್ಬೆ ಹೌಸ್‌ನ ಅಬ್ಬಾಸ್ (53) ಶಿಕ್ಷೆಗೊಳಗಾದ ಅಪರಾಧಿ.
ಅಬ್ಬಾಸ್ 2019ರ ಅ. 24ರಂದು ನಗರದ ಫಳ್ನೀರ್ನಲ್ಲಿರುವ ಜೆರಾಕ್ಸ್ ಅಂಗಡಿಯೊಂದರಲ್ಲಿ 100 ರೂ. ಮುಖಬೆಲೆಯ 3 ಅಸಲಿ ನೋಟುಗಳನ್ನು ನೀಡಿ ಅದರಿಂದ ಒಟ್ಟು 20 ಕಲರ್ ಜೆರಾಕ್ಸ್ ಮಾಡಿಸಿಕೊಂಡಿದ್ದ. ಅದೇ ವರ್ಷ ನ.5 ರಂದು ಮುಲ್ಕಿ ಪೇಟೆಯ ಅಂಗಡಿಯೊಂದಕ್ಕೆ ಒಂದು ನಕಲಿ ನೋಟು ನೀಡಿ 1 ಬಾಟಲಿ ನೀರು ಮತ್ತೊಂದು ಅಂಗಡಿಯಲ್ಲಿ ಬಿಸ್ಕತ್ ಅನ್ನು ಖರೀದಿಸಿದ್ದ. ಇನ್ನೊಂದು ಕಡೆ ಚಹಾ ಮತ್ತು ತಿಂಡಿ ಸೇವಿಸಿದ್ದ. ಅಲ್ಲದೇ, ಮತ್ತೊಂದು ನೋಟನ್ನು ನೀಡಿ ಒಬ್ಬರಿಂದ ಚಿಲ್ಲರೆ ಪಡೆದುಕೊಂಡಿದ್ದ. ಹೀಗೆ 4 ನೋಟುಗಳನ್ನು ಬಳಸಿದ್ದ. ಉಳಿದ ನೋಟುಗಳು ಆತನ ಬಳಿಯೇ ಇದ್ದವು. ಆದರೆ, ಈತ ನೀಡಿದ್ದ ನೋಟಿನ ಬಗ್ಗೆ ಕೆಲವರು ಸಂದೇಹ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಮುಲ್ಕಿ ಠಾಣಾ ಪಿಎಸ್‌ಐ ಶೀತಲ್ ಅಲಗೂರು, ಕಾನ್ಸ್ಟೇಬಲ್ ಸುರೇಶ್ ಕಾರ್ಯಾಚರಣೆ ನಡೆಸಿ ಸಾರ್ವಜನಿಕರ ಸಹಕಾರದಿಂದ ಆರೋಪಿಯನ್ನು ಬಂಧಿಸಿದ್ದರು.
ಇದನ್ನೂ ಓದಿ: ಕಲರ್ ಪ್ರಿಂಟರ್ನಿಂದಲೇ ಖೋಟಾ ನೋಟು ಮುದ್ರಣ: ಇಬ್ಬರ ಬಂಧನ
ಈ ಕುರಿತು ಇನ್ಸ್ಪೆಕ್ಟರ್ ಜಯರಾಮ ಡಿ ಗೌಡ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ಅವರು ಅಪರಾಧಿಗೆ ಐಪಿಸಿ ಸೆಕ್ಷನ್ 489 (ಸಿ)ಯಂತೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ಮತ್ತು ಐದು ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 2 ತಿಂಗಳ ಸಜೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ನಾರಾಯಣ ಶೇರಿಗಾರ್ ಯು. ವಾದ ಮಂಡಿಸಿದರು.
ಇದನ್ನೂ ಓದಿ: ಅಂಗಡಿ ಮಾಲೀಕರೇ ಎಚ್ಚರ.. ಜೆರಾಕ್ಸ್ ನೋಟು ಕೊಟ್ಟು ಯಾಮಾರಿಸ್ತಾರೆ ಚಾಲಾಕಿಗಳು!
ಇನ್ನು ಆರೋಪಿಯು ಮಂಗಳೂರಿನ ಜೆರಾಕ್ಸ್ ಅಂಗಡಿಗೆ ತೆರಳಿ ನೋಟುಗಳ ಜೆರಾಕ್ಸ್ ಮಾಡಿಕೊಡುವಂತೆ ಹೇಳಿದ್ದ. ಅದಕ್ಕೆ ಸಿಬ್ಬಂದಿ ನಿರಾಕರಿಸಿದ್ದರು. ಆಗ ಈತ ತನ್ನ ಮಕ್ಕಳಿಗೆ ಶಾಲೆಯಲ್ಲಿ ಪ್ರಾಜೆಕ್ಟ್ಗೆ ನೋಟಿನ ಜೆರಾಕ್ಸ್ ಬೇಕು ಎಂದು ಹೇಳಿದ್ದಾನೆ. ಅದಕ್ಕೂ ಸಿಬಂದಿ ಒಪ್ಪದಿದ್ದಾಗ ಹೆದರಿಸಿ ಒತ್ತಾಯಪೂರ್ವಕವಾಗಿ ಜೆರಾಕ್ಸ್ ಮಾಡಿಸಿಕೊಂಡಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿತ್ತು.
ಇದನ್ನೂ ಓದಿ: 5 ಸಾವಿರ ಜೆರಾಕ್ಸ್ ನೋಟು ನೀಡಿ ಕುರಿ ಮರಿ ಎಗರಿಸಿದ ವಂಚಕರು