ಮಂಗಳೂರು: ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಎಸ್ಸಿಡಿಸಿಸಿ ಬ್ಯಾಂಕ್ ಮತ್ತು ನವೋದಯ ಸ್ವ-ಸಹಾಯ ಸಂಘಗಳ ಮೂಲಕ ಸಂಗ್ರಹವಾದ ಒಟ್ಟು ಒಂದು ಕೋಟಿಗೂ ಅಧಿಕ ಮೊತ್ತದ ಹಣವನ್ನು ಉಡುಪಿಯ ಶ್ರೀಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರಿಗೆ ಹಸ್ತಾಂತರಿಸಲಾಯಿತು.
ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ನಡೆದ ಉಡುಪಿ ಶ್ರೀ ಪೇಜಾವರ ಮಠದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಗುರುವಂದನೆ ಹಾಗೂ ಎಸ್ಸಿಡಿಸಿ ಬ್ಯಾಂಕ್ನ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅವರ 72ನೇ ಹುಟ್ಟುಹಬ್ಬ ಸಂಭ್ರಮ ಕಾರ್ಯಕ್ರಮದಲ್ಲಿ ಈ ದೇಣಿಗೆ ಹಣ(1,01,11,072 ರೂ.)ಯನ್ನು ನೀಡಲಾಯಿತು.
ಗುರುವಂದನೆ ಹಾಗೂ ದೇಣಿಗೆ ಸ್ವೀಕರಿಸಿ ಬಳಿಕ ಪೇಜಾವರ ಶ್ರೀಗಳು ಮಾತನಾಡಿ, ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಭವ್ಯವಾದ ಶ್ರೀರಾಮ ಮಂದಿರ ಭಾರತದ ಸಂಸ್ಕೃತಿಯ ಪ್ರತೀಕವಾಗಿ ಮೂಡಿ ಬರಲಿದೆ. ಶ್ರೀರಾಮ ನಮಗೆಲ್ಲರಿಗೂ ಆದರ್ಶವಾಗಿದ್ದು, ನಾವೆಲ್ಲರೂ ಶ್ರೀರಾಮನಂತೆ ಬದುಕಬೇಕೆ ಹೊರತು ರಾವಣನಂತಲ್ಲ. ಸಮಾಜದಲ್ಲಿ ನಾವೆಲ್ಲಾ ಹೇಗೆ ಬದುಕು ಸಾಗಿಸಬೇಕು ಎಂಬುದಕ್ಕೆ ಶ್ರೀರಾಮ ಆದರ್ಶ. ಸಮಾಜದ ಪ್ರತಿಯೊಬ್ಬರೂ ಅವನ ಆದರ್ಶ ಪಾಲಿಸೋಣ ಎಂದರು.
ಓದಿ: ಡಿಕೆಶಿ ಭೇಟಿಯಾದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ : ನಾಳೆ ಕಾಂಗ್ರೆಸ್ ಸೇರ್ಪಡೆ
ಬಳಿಕ ಗಣಿ ಹಾಗೂ ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅವರು ಯಾವುದಾದರೂ ಸಂಸ್ಥೆಗಳು, ಕಂಪನಿಗಳು ಕಷ್ಟದಲ್ಲಿದ್ದಲ್ಲಿ ಅವರನ್ನು ಕರೆಸಿ ಅವರಿಗೆ ಸಹಾಯಹಸ್ತ ನೀಡುವ ಮಹಾನ್ ವ್ಯಕ್ತಿತ್ವ ಹೊಂದಿದ್ದಾರೆ. ಉತ್ತರ ಕರ್ನಾಟಕದ ಹತ್ತಾರು ಕಾರ್ಖಾನೆಗಳಿಗೆ ಸಹಾಯ ಹಸ್ತ ಚಾಚಿ ಲಕ್ಷಾಂತರ ಮಂದಿಗೆ ಉದ್ಯೋಗ ನೀಡುತ್ತಿದ್ದಾರೆ ಎಂದರು.
ಈ ವೇಳೆ ಕಾರ್ಯಕ್ರಮದಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಅಭಿನಂದಿಸಲಾಯಿತು. ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ವೇದವ್ಯಾಸ ಕಾಮತ್ ಮತ್ತಿತರರು ಉಪಸ್ಥಿರಿದ್ದರು.