ಮಂಗಳೂರು: ಅಂತರ್ಜಲ ಅಭಿವೃದ್ಧಿಗಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ, ಜಲಶಕ್ತಿ ಅಭಿಯಾನದ ಮೂಲಕ ಎ.1 ರಿಂದ 100 ದಿನಗಳ ತೆರೆದ ಬಾವಿ ನಿರ್ಮಾಣಕ್ಕೆ ಚಾಲನೆ ದೊರಕಿದೆ. ಈ ಮೂಲಕ ದ.ಕ.ಜಿಲ್ಲೆಯಲ್ಲಿ ಮಂಗಳೂರು ತಾಲೂಕು ಅಗ್ರಸ್ಥಾನ ಪಡೆದಿದೆ.
ದ.ಕ.ಜಿಲ್ಲೆಯಲ್ಲಿ ಪ್ರಸ್ತುತ 759 ತೆರೆದ ಬಾವಿ ನಿರ್ಮಾಣವಾಗುತ್ತಿದೆ. ಮಂಗಳೂರಿನಲ್ಲಿ ತೆರೆದ ಬಾವಿ ನಿರ್ಮಾಣಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದ್ದು, ಈವರೆಗೆ 177 ತೆರೆದ ಬಾವಿಗಳನ್ನು ನಿರ್ಮಾಣ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿಯೇ ಮಂಗಳೂರು ಬಾವಿ ನಿರ್ಮಾಣದಲ್ಲಿ ಅಗ್ರಸ್ಥಾನ ತನ್ನದಾಗಿಸಿಕೊಂಡಿದೆ.
ಅಂತರ್ಜಲ ಟಾಸ್ಕ್ ಫೋರ್ಸ್ ನಡಿ ವರ್ಷಂಪ್ರತಿ ನಡೆಸುವ ಮೌಲ್ಯಮಾಪನದಿಂದ ತೆರೆದ ಬಾವಿಯ ನೀರಿನ ಬಳಕೆದಾರರ ಸಂಖ್ಯೆಯು ಹೆಚ್ಚಳವಾಗುತ್ತಿದೆ. ನರೇಗಾ ಯೋಜನೆಯಡಿ 15 ಅಡಿ ಆಳ ಹಾಗೂ 8 ಅಡಿ ಸುತ್ತಳತೆಯ ತೆರೆದ ಬಾವಿ ನಿರ್ಮಿಸಲಾಗುತ್ತದೆ. ಈ ಬಾವಿಗೆ 1.25 ಲಕ್ಷ ರೂ. ಪಾವತಿಸಲು ಅವಕಾಶವಿದೆ. ಇನ್ನೂ ಹೆಚ್ಚಿನ ಆಳ ಹಾಗೂ ಅಗಲ ಬೇಕಾದಲ್ಲಿ ಇದರ ಖರ್ಚನ್ನು ಫಲಾನುಭವಿಗಳೇ ಭರಿಸಬೇಕಾಗುತ್ತದೆ. ಮಂಗಳೂರು ತಾಲೂಕಿನಲ್ಲಿ ನರೇಗಾ ಯೋಜನೆಯಲ್ಲಿ ತೆರೆದ ಬಾವಿ ನಿರ್ಮಾಣಕ್ಕೆ 40,076 ಮಾನವ ದಿನಗಳನ್ನು ವಿನಿಯೋಗಿಸಲಾಗಿದೆ.