ಮಂಗಳೂರು: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧೀನದಲ್ಲಿದ್ದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸಿರುವುದನ್ನು ವಿರೋಧಿಸಿ ಇಂದು ದ. ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಬಜ್ಪೆಯ ಕೆಂಜಾರು ಬಳಿ ಪ್ರತಿಭಟನೆ ನಡೆಸಿತು.
ಈ ಸಂದರ್ಭ ಪ್ರತಿಭಟನಾಕಾರರು 50 ವರ್ಷಗಳ ಕಾಲ ವಿಮಾನ ನಿಲ್ದಾಣವನ್ನು ನಿರ್ವಹಣೆ ಮಾಡಲು ಕೇಂದ್ರ ಸರ್ಕಾರ ಅದಾನಿ ಕಂಪನಿಗೆ ನೀಡಿರುವುದನ್ನು ಹಾಗೂ ಅದಾನಿ ವಿಮಾನ ನಿಲ್ದಾಣವೆಂದು ಮರುನಾಮಕರಣ ಮಾಡಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಸತತ ಪ್ರಯತ್ನದಿಂದ ಬಜ್ಪೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೊಂಡಿತ್ತು. ಅದನ್ನು ನಿರ್ಮಾಣ ಮಾಡಬೇಕಾದರೆ ಅಂದಿನ ದ. ಕ. ಜಿಲ್ಲಾ ಲೋಕಸಭಾ ಸದಸ್ಯ ಶ್ರೀನಿವಾಸ ಮಲ್ಯ ಅವರು ಸಾಕಷ್ಟು ಹೋರಾಟ ಮಾಡಿದ್ದಾರೆ. ಅದಕ್ಕೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸಂಪೂರ್ಣ ಸಾಂಗತ್ಯವೂ ಇತ್ತು.
ಇಂದು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವಿಮಾನ ನಿಲ್ದಾಣವನ್ನು ಅದಾನಿ ಕಂಪನಿಗೆ ಮಾರಾಟ ಮಾಡಿದೆ. ಇದು ಜವಾಹರಲಾಲ್ ನೆಹರೂ, ಶ್ರೀನಿವಾಸ ಮಲ್ಯರಿಗೆ ಹಾಗೂ ಈ ಜಿಲ್ಲೆಯ ಜನತೆಗೆ ಮಾಡಿರುವ ಅವಮಾನ. ಇದನ್ನು ಯಾರಿಂದಲೂ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ವಿಮಾನ ನಿಲ್ದಾಣವನ್ನು ಖಾಸಗಿಯವರಿಗೆ ಮಾರಾಟ ಮಾಡಿರೋದಕ್ಕೆ ಕಾಂಗ್ರೆಸ್‌ನ ವಿರೋಧವಿದೆ. ಇಂದು ದೇಶವನ್ನು ಆಳುತ್ತಿರುವ ಸರಕಾರ ಕೆಳಗಿಳಿದಾಗ ಮಾತ್ರ ಇಂತಹ ಸಮಸ್ಯೆಗಳು ಬಗೆಹರಿಯಲು ಸಾಧ್ಯ. ನಮ್ಮ ಮಾತಿಗೆ ಅವರು ಬೆಲೆ ಕೊಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅವರ ಸರ್ವಾಧಿಕಾರಿ ಮನೋವೃತ್ತಿಯಿಂದ ಅವರು ಹೋಗುತ್ತಿದ್ದಾರೆ. ಅಮೆರಿಕಾದಲ್ಲಿ ಜೋ ಬೈಡನ್ ಯಾವ ರೀತಿಯಲ್ಲಿ ಅಧಿಕಾರ ವಹಿಸಿದರೋ ಅದೇ ರೀತಿಯ ಬದಲಾವಣೆಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ರಮಾನಾಥ ರೈ ಹೇಳಿದರು.
ದ. ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಪಣಂಬೂರು ಬಂದರು, ಸುರತ್ಕಲ್ ಎನ್ ಐಟಿಕೆ, ಮಂಗಳೂರು ರೈಲ್ವೆ ನಿಲ್ದಾಣ ಹಿಂದಿನ ಕಾಂಗ್ರೆಸ್ ಸರ್ಕಾರ ನೀಡಿದ ಕೊಡುಗೆ. ಆದರೆ ಇಂದಿನ ಬಿಜೆಪಿ ಸರ್ಕಾರ ಬಂಡವಾಳಶಾಹಿಗಳ ಕೈಗೊಂಬೆಯಾಗಿ ವರ್ತಿಸಿ ಕೇಂದ್ರಸರಕಾರದ ಅಡಿಯಲ್ಲಿರುವ ಇಂತಹ ಸಂಸ್ಥೆಗಳನ್ನು ಖಾಸಗಿಯವರಿಗೆ ಒಪ್ಪಿಸುತ್ತದೆ. ಈ ಮೂಲಕ ಮಂಗಳೂರಿನ ಅಸ್ತಿತ್ವವನ್ನು ಹಂತಹಂತವಾಗಿ ನಾಶಮಾಡುವಂತಹ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಅದಾನಿ ಕಂಪನಿಗೆ 50 ವರ್ಷಗಳ ಕಾಲ ನಿರ್ವಹಣೆ ಮಾಡಲು ನೀಡಿದ ತಕ್ಷಣ ಅದರ ಹೆಸರನ್ನು ಅದಾನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ. ನಿಲ್ದಾಣಕ್ಕೆ ಯಾರದೋ ಹೆಸರನ್ನು ಇಡುವುದಕ್ಕಿಂತ ಯುಗಪುರುಷರೆಂದು ವಿಖ್ಯಾತರಾದ ಕೋಟಿ-ಚೆನ್ನಯರ ಹೆಸರನ್ನು ಇಡಬಹುದು. ಅಲ್ಲದೆ, ದ. ಕ. ಜಿಲ್ಲೆಯ ಏಳಿಗೆಗೆ ಅವಿರತ ಶ್ರಮಿಸಿದ ಶ್ರೀನಿವಾಸ ಮಲ್ಯ, ಜಾರ್ಜ್ ಫರ್ನಾಂಡೀಸ್ ಅವರ ಹೆಸರನ್ನಿಡಲು ನಾನು ಒತ್ತಾಯಿಸುತ್ತೇನೆ ಎಂದು ಮಿಥುನ್ ರೈ ಹೇಳಿದರು.