ಮಂಗಳೂರು: ಅಸ್ಸಾಂನಲ್ಲಿ ಎನ್.ಆರ್.ಸಿ.ಯಿಂದ ಹೊರಗುಳಿದಿರುವ ಸುಮಾರು 19 ಲಕ್ಷ ಮಂದಿಯಲ್ಲಿ 13 ಲಕ್ಷಕ್ಕಿಂತಲೂ ಅಧಿಕ ಮಂದಿ ಹಿಂದೂ ಧರ್ಮೀಯರನ್ನು ಒಳ ಸೇರಿಸುವ ಉದ್ದೇಶದಿಂದ ಎನ್.ಆರ್.ಸಿ ಜಾರಿಗೊಳಿಸಲಾಗುತ್ತಿದೆ. ಅದರಲ್ಲಿ ಉಳಿದಿರುವ 6 ಲಕ್ಷ ಮುಸ್ಲಿಂ ಧರ್ಮದವರನ್ನು ಹೇಗಾದರೂ ಮಾಡಿ ಹೊರ ಕಳಿಸುವ ಉದ್ದೇಶದಿಂದ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳ ಹೆಸರನ್ನು ಉಲ್ಲೇಖಿಸಿ ಬಿಜೆಪಿ ಸರ್ಕಾರ ಬಹುದೊಡ್ಡ ಷಡ್ಯಂತ್ರ ನಡೆಸುತ್ತಿದೆ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ವಕ್ತಾರ ಎ.ಸಿ.ವಿನಯರಾಜ್ ಆರೋಪಿಸಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಎಷ್ಟು ಮಂದಿ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳಿಂದ ಧಾರ್ಮಿಕ ಕಿರುಕುಳಕ್ಕೆ ಒಳಪಟ್ಟು 2014 ಡಿ. 31ರ ಒಳಗೆ ಭಾರತಕ್ಕೆ ಬಂದಿದ್ದಾರೆ. ನಿಮ್ಮಲ್ಲಿ ಅದರ ದಾಖಲೆ ಇದೆಯೇ?, ಇದ್ದರೆ ಯಾಕೆ ಈ ದೇಶದ ಜನತೆಯ ಮುಂದೆ ಅದನ್ನು ಇಡುತ್ತಿಲ್ಲ ಎಂದು ಈ ಸಂದರ್ಭ ಕೇಂದ್ರ ಸರ್ಕಾರಕ್ಕೆ ಸವಾಲೆಸೆದರು.
ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳ ಪ್ರಜೆಗಳಿಗೆ ಭಾರತದ ಪೌರತ್ವ ನೀಡಬೇಕೆಂದು ಕಾಂಗ್ರೆಸ್ ಪಕ್ಷ ಎಲ್ಲಿಯೂ ಹೇಳೋದಿಲ್ಲ. ಆದರೆ ಕೇಂದ್ರ ಸರ್ಕಾರ ಹೇಳುವ ಮುಸ್ಲಿಂ ಹೊರತುಪಡಿಸಿ ಉಳಿದ ಆರು ಧರ್ಮಗಳು ಎಷ್ಟು ಮಂದಿ ಭಾರತಕ್ಕೆ ವಲಸೆ ಬಂದಿದ್ದಾರೆ ಇದರ ದಾಖಲೆ ನೀಡಲಿ. ಇಂದು ದೇಶದಾದ್ಯಂತ ಎನ್.ಆರ್.ಸಿ.ಯನ್ನು ಜಾರಿಗೊಳಿಸಲಾಗುತ್ತದೆ. ಆದ್ದರಿಂದ ಇದಕ್ಕೆ ಎಷ್ಟು ಅಧಿಕಾರಿಗಳು ಬೇಕಾಗುತ್ತದೆ, ಎಷ್ಟು ಫಾರಿನ್ ಟ್ರಿಬ್ಯುನಲ್ಗಳು ಸ್ಥಾಪಿಸಬೇಕಾಗುತ್ತದೆ. ಇದಕ್ಕೆ ಎಷ್ಟು ಪ್ರಮಾಣದ ಹಣ ಬೇಕಾಗಬಹುದು ಎಂಬ ಲೆಕ್ಕಾಚಾರ ವಿದೆಯೇ ಎಂದು ಪ್ರಶ್ನಿಸಿದರು.
ಅಸ್ಸಾಂನಲ್ಲಿ ಸುಮಾರು ಎರಡು ಸಾವಿರ ಕೋಟಿ ರೂ. ಎನ್.ಆರ್.ಸಿ.ಗೆ ಖರ್ಚು ಮಾಡಲಾಗಿದೆ. ಆದರೂ ಗೊಂದಲ ಹಾಗೆಯೇ ಇದೆ. ಹಾಗಾದರೆ ನಮ್ಮ ದೇಶಾದ್ಯಂತ ಎನ್ಆರ್ಸಿ ಜಾರಿಗೊಳಿಸಲು ಕನಿಷ್ಠ 50 ಸಾವಿರ ಕೋಟಿ ರೂ. ಖರ್ಚಾಗಬಹುದು. ಆರ್ಥಿಕ ಸಂಕಷ್ಟಕ್ಕೆ ಭಾರತ ಸಿಲುಕಿದೆ. ಇಂತಹ ಸಂದರ್ಭ ಈ ಕಾನೂನು ಜಾರಿಗೆ ತರುವ ಅವಶ್ಯಕತೆ ಇತ್ತೇ?. ಪುನಃ ಈ ದೇಶದ ಜನತೆಯ ಮೇಲೆ 50 ಸಾವಿರ ಕೋಟಿ ರೂ. ಹೊರೆ ಹಾಕಬೇಕಿತ್ತೇ?. ಕಳ್ಳ ನೋಟುಗಳನ್ನು ನಿಲ್ಲಿಸಲಾಗುತ್ತದೆ ಎಂದು ದೇಶದಲ್ಲಿ ನೋಟು ಅಪನಗದೀಕರಣ ಮಾಡಲಾಯಿತು. ಈ ಸಂದರ್ಭ ದೇಶದ ಜನತೆ ಈ ಬಗ್ಗೆ ಚಕಾರ ಎತ್ತದೆ ಮೌನ ವಹಿಸಿದ್ದರು. ಅದರ ಪರಿಣಾಮವನ್ನು ದೇಶ ಎದುರಿಸುತ್ತಿದೆ. ಎನ್ಆರ್ಸಿ ಕಾಯ್ದೆಯಿಂದ ಬರೀ ಮುಸ್ಲಿಂ ಜನಾಂಗಕ್ಕೆ ಮಾತ್ರ ತೊಡಕು ಎಂದು ದೇಶದ ಜನತೆ ಮೌನ ವಹಿಸಬಾರದು. ಇದರಿಂದ ಎಲ್ಲರಿಗೂ ತೊಂದರೆ ಇದೆ. ಆದ್ದರಿಂದ ಇದನ್ನು ಯಾವುದೇ ರೀತಿಯಲ್ಲಿ ಸಹಿಸಲು ಸಾಧ್ಯವಿಲ್ಲ. ಇಲ್ಲಿಯೇ ಜನಿಸಿದವರನ್ನು ಎನ್ಆರ್ಸಿ ಮತ್ತು ಸಿಎಎಯಿಂದ ಹೊರಕಳಿಸಲು ಸಾಧ್ಯವಿಲ್ಲ. ಈ ಫ್ಯಾಸಿಸ್ಟ್ ವಾದಿಗಳಿಂದ ಭಾರತವನ್ನು ನಾವು ರಕ್ಷಣೆ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ಈ ಕಾನೂನಿನ ವಿರುದ್ಧ ಎರಡನೇ ಸ್ವಾತಂತ್ರ್ಯ ಆಂದೋಲನದ ರೀತಿಯಲ್ಲಿ ಹೋರಾಟ ಮಾಡಲಿದೆ ಎಂದು ಎ.ಸಿ.ವಿನಯರಾಜ್ ಸ್ಪಷ್ಟಪಡಿಸಿದರು.