ಮಂಗಳೂರು: ಪ್ರತಿಪಕ್ಷ ಕಾಂಗ್ರೆಸ್ಅನ್ನು ಯಾವುದೇ ರೀತಿಯ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಜಿಲ್ಲಾಡಳಿತ ಸೆಂಟ್ರಲ್ ಮಾರುಕಟ್ಟೆ ಸ್ಥಳಾಂತರ ಮಾಡಿರುವುದು ಖಂಡನೀಯ ಎಂದು ಮಂಗಳೂರು ಮಾಜಿ ಶಾಸಕ ಜೆ.ಆರ್.ಲೋಬೊ ಕಿಡಿಕಾರಿದರು.
ಮಹಾನಗರ ಪಾಲಿಕೆ ಚುನಾಯಿತ ಸಂಸ್ಥೆಯಾಗಿದ್ದು, ಇಲ್ಲಿ ಆಡಳಿತ ನಡೆಸಲು ಒಂದು ಕೌನ್ಸಿಲ್ ಇದೆ. ಆದರೆ, ಕೊರೊನಾ ಸೋಂಕು ನೆಪವಾಗಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ಕಾರ್ಪೋರೇಟರ್ಗಳನ್ನು ಗಣನೆಗೆ ತೆಗೆದುಕೊಳ್ಳದೇ ಬಿಜೆಪಿ ಹಲವಾರು ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಬಿಜೆಪಿ ಸಂಸತ್ ಸದಸ್ಯರು, ಶಾಸಕರು ಸೇರಿಸಿಕೊಂಡು ತಮಗೆ ಇಷ್ಟ ಬಂದಂತೆ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ಮಾರುಕಟ್ಟೆ ಸ್ಥಳಾಂತರ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಮಹಾನಗರ ಪಾಲಿಕೆಯ ಸದಸ್ಯರೊಂದಿಗೆ ಯಾವುದೇ ಚರ್ಚೆ ನಡೆಸದೇ ಇಂತಹ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಿಗಳಿಗೆ ನೆಹರೂ ಮೈದಾನದ ಬಳಿ ವ್ಯವಸ್ಥೆ ಮಾಡಲು ಈಗಾಗಲೇ ತೀರ್ಮಾನವಾಗಿತ್ತು. ಆದರೆ, ಈಗ ಏಕಾಏಕಿ ಎಪಿಎಂಸಿಗೆ ಸ್ಥಳಾಂತರ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ವಿರೋಧವಾಗಿದೆ ಎಂದು ಹೇಳಿದರು.
ಪ್ರಧಾನಿ ಕರೆ ಖಂಡನೀಯ: ಕೊರೊನಾ ಸೋಂಕು ತಡೆಗೆ ಬಿಜೆಪಿ ಕಾರ್ಯಕರ್ತರಿಗೆ ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹಿಸಲು ಪ್ರಧಾನಿ ಕರೆ ನೀಡಿರುವುದು ನಿಜಕ್ಕೂ ಖಂಡನೀಯ. ಕೊರೊನಾ ರಾಷ್ಟ್ರೀಯ ವಿಪತ್ತಾಗಿದ್ದು, ಇದನ್ನು ಕೊನೆಗಾಣಿಸಲು ಕಾಂಗ್ರೆಸ್ ಪಕ್ಷ ಭೇದ ಮರೆತು ಸಹಕಾರ ನೀಡುತ್ತಿರುವಾಗ ಬಿಜೆಪಿ ಪಕ್ಷದ ಧ್ವಜ ಹಿಡಿದುಕೊಂಡು ದೇಣಿಗೆ ಸಂಗ್ರಹಿಸುವುದು ಎಷ್ಟು ಸರಿ ಎಂದು ಮಾಜಿ ಶಾಸಕ ಲೋಬೊ ಪ್ರಶ್ನಿಸಿದರು.