ಮಂಗಳೂರು: ಸಂಚಾರದಲ್ಲಿದ್ದ ನಗರ ಸಾರಿಗೆ ಬಸ್‌ನಿಂದ ಕಂಡಕ್ಟರ್ ಹೊರಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟಿರುವ ಘಟನೆ ನಂತೂರಿನಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ನಿವಾಸಿ, ಪ್ರಸ್ತುತ ಸುರತ್ಕಲ್ ತಡಂಬೈಲ್ನಲ್ಲಿ ನೆಲೆಸಿರುವ ಈರಯ್ಯ (23) ಮೃತಪಟ್ಟವರು. ಇವರು 15 ಸಂಖ್ಯೆಯ ಖಾಸಗಿ ಸಿಟಿ ಬಸ್ ನಿರ್ವಾಹಕರಾಗಿದ್ದರು. ಮಂಗಳವಾರ ಮಧ್ಯಾಹ್ನದ ಸುಮಾರಿಗೆ ಘಟನೆ ನಡೆದಿದೆ.
ಬಸ್ ಕೆಪಿಟಿಯಿಂದ ಆಗಮಿಸಿ ನಂತೂರು ವೃತ್ತದಲ್ಲಿ ವೇಗವಾಗಿ ತಿರುವು ಪಡೆಯುತ್ತಿದ್ದಾಗ, ಮುಂಭಾಗದ ಬಾಗಿಲಲ್ಲಿ ನಿಂತಿದ್ದ ಕಂಡಕ್ಟರ್ ಕೆಳಕ್ಕೆ ಬಿದ್ದಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ಮತ್ತು ಸಾರ್ವಜನಿಕರು ಸೇರಿ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ರಾತ್ರಿ 8 ಗಂಟೆಗೆ ಮೃತಪಟ್ಟಿದ್ದಾರೆ. ಬಸ್ನ ಅತಿಯಾದ ವೇಗವೇ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಕದ್ರಿ ಸಂಚಾರಿ ಠಾಣೆಯಲ್ಲಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಯಾಣಿಕನನ್ನು ಬಸ್‌ನಿಂದ ತಳ್ಳಿದ ಕಂಡಕ್ಟರ್ (ಪ್ರತ್ಯೇಕ ಪ್ರಕರಣ): ಕೆಎಸ್ಆರ್ಟಿಸಿ ಬಸ್ ನಿರ್ವಾಹಕನೋರ್ವ ಪ್ರಯಾಣಿಕನ ಎದೆಗೆ ಕಾಲಿನಿಂದ ಒದ್ದು, ರಸ್ತೆಗೆ ತಳ್ಳಿರುವ ಅಮಾನವೀಯ ಘಟನೆ ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ (ಸೆಪ್ಟೆಂಬರ್- 7-2022) ನಡೆದಿತ್ತು. ಈಶ್ವರಮಂಗಲ ಪೇಟೆಯ ಜಂಕ್ಷನ್ನಲ್ಲಿ ಘಟನೆ ನಡೆದಿದೆ. ಪ್ರಯಾಣಿಕನ ಜೊತೆ ಅನುಚಿತ ವರ್ತನೆ ತೋರಿದ ವ್ಯಕ್ತಿಯನ್ನು ಕೆಎ 21 ಎಫ್ 0002 ಬಸ್ ನಂಬರ್‌ನ ನಿರ್ವಾಹಕ ಸುಬ್ಬರಾಜ್ ರೈ ಎಂದು ಗುರುತಿಸಲಾಗಿತ್ತು.
ಇದನ್ನೂ ಓದಿ: ಟಿಕೆಟ್ ಕೇಳಿದ್ದಕ್ಕೆ ಯುವಕನ ಮೇಲೆ ಹಲ್ಲೆ: ಬಸ್ ಕಂಡಕ್ಟರ್ ವಿರುದ್ಧ ಆರೋಪ
ಮೇಲ್ನೋಟಕ್ಕೆ ಈ ಪ್ರಯಾಣಿಕ ಪಾನಮತ್ತನಂತೆ ಕಂಡುಬಂದಿದ್ದ. ಬಸ್ ಹತ್ತುವಾಗಲೇ ನಿರ್ವಾಹಕ ಪ್ರಯಾಣಿಕನನ್ನು ತಡೆದು ಆತನ ಕೊಡೆಯನ್ನು ರಸ್ತೆಗೆಸೆದಿದ್ದರು. ನಂತರ ಬಸ್‌ನಿಂದ ಕೆಳಗಿಳಿಯುವಂತೆ ಸೂಚಿಸಿದ ನಿರ್ವಾಹಕ, ಪ್ರಯಾಣಿಕನಿಗೆ ಕೈಯಿಂದ ಹಲ್ಲೆ ನಡೆಸಿದ್ದರು. ಕೊನೆಗೆ, ಸಿನಿಮಾ ಶೇಲಿಯಲ್ಲೇ ಕಾಲಿನಿಂದ ಪ್ರಯಾಣಿಕನ ಎದೆಗೆ ಒದ್ದು, ರಸ್ತೆಗೆ ತಳ್ಳಿದ್ದರು. ರಸ್ತೆಯಲ್ಲಿ ಬಿದ್ದ ಪ್ರಯಾಣಿಕನನ್ನು ಅಲ್ಲಿಯೇ ಬಿಟ್ಟು ಬಸ್ ಸಂಚರಿಸಿತ್ತು.
ಬಸ್ಸಿನಲ್ಲಿರುವ ವ್ಯಕ್ತಿ ಯಾವುದೇ ಸ್ಥಿತಿಯಲ್ಲಿದ್ದರೂ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ನಿರ್ವಾಹಕರಿಗಿಲ್ಲ. ಮೇಲ್ನೋಟಕ್ಕೆ ನಿರ್ವಾಹಕ ಮಾಡಿರುವುದು ತಪ್ಪು ಎಂದು ಕಾಣುತ್ತಿದೆ. ಹೀಗಾಗಿ, ಕೂಡಲೇ ಸೇವೆಯಿಂದ ಅಮಾನತು ಮಾಡಲಾಗುವುದು ಎಂದು ಪುತ್ತೂರು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಈಟಿವಿ ಭಾರತಕ್ಕೆ ತಿಳಿಸಿದ್ದರು.
ಇದನ್ನೂ ಓದಿ: ಪ್ರಯಾಣಿಕನ ಎದೆಗೆ ಒದ್ದು ಬಸ್ಸಿನಿಂದ ಹೊರಹಾಕಿದ ಕೆಎಸ್ಸಾರ್ಟಿಸಿ ಕಂಡಕ್ಟರ್! ವಿಡಿಯೋ