ಮಂಗಳೂರು: ನಗರದ ಸುತ್ತಮುತ್ತಲಿನ ಕೆಲವೊಂದು ಸಹಕಾರಿ ಬ್ಯಾಂಕ್ಗಳಲ್ಲಿ ನಕಲಿ ಒಡವೆಗಳನ್ನು ಅಡವಿಟ್ಟು ವಂಚನೆಗೈಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಒಡವೆಗಳನ್ನು ತೆಗೆದುಕೊಳ್ಳುವ ವೇಳೆ ಬ್ಯಾಂಕ್ಗಳದ್ದೇ ಪರಿಶೀಲನಾ ವಿಧಾನಗಳಿದ್ದರೂ ಸಹ ಈ ರೀತಿಯಲ್ಲಿ ಕೃತ್ಯ ನಡೆಯುತ್ತಿದೆ. ಆದ್ದರಿಂದ ಈ ಬಗ್ಗೆ ಪೊಲೀಸ್ ಇಲಾಖೆಯಿಂದ ಸಮಗ್ರ ತನಿಖೆ ನಡೆಸಲಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು.
ತಮ್ಮ ಕಚೇರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಮೂರು ಪೊಲೀಸ್ ಠಾಣೆಗಳಲ್ಲಿ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ. ಇದನ್ನು ಹೊರತುಪಡಿಸಿ ಬೇರೆಡೆಗಳಲ್ಲಿ ಇದೇ ತರಹದ ಕೃತ್ಯಗಳು ನಡೆದಿವೆ. ಪ್ರಕರಣಗಳಿಗೆ ಸಂಬಂಧಿಸಿದ ಸಹಕಾರಿ ಬ್ಯಾಂಕ್ಗಳ ಅಧಿಕಾರಿಗಳು ನಿನ್ನೆ ನನ್ನನ್ನು ಭೇಟಿ ಮಾಡಿದ್ದಾರೆ. ಅವರಲ್ಲಿ ಬ್ಯಾಂಕುಗಳ ಎಲ್ಲಾ ಶಾಖೆಗಳಲ್ಲಿಯೂ ಚಿನ್ನಗಳನ್ನು ಮತ್ತೊಮ್ಮೆ ಪರಿಶೀಲನೆ ನಡೆಸಲು ಸೂಚನೆ ನೀಡಿದ್ದೇನೆ ಎಂದರು.
ಇನ್ನು ಈಗಾಗಲೇ ಕೆಲ ಬ್ಯಾಂಕುಗಳು ವರದಿ ನೀಡಿದ್ದು, ಈ ಬಗ್ಗೆ ಎಕಾನಮಿಕ್ ನಾರ್ಕೊಟಿಕ್ ಆ್ಯಂಡ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತದೆ ಎಂದು ಎನ್.ಶಶಿಕುಮಾರ್ ತಿಳಿಸಿದರು.