ಪುತ್ತೂರು(ದಕ್ಷಿಣಕನ್ನಡ): ತಾಲೂಕಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲ ಪೂರ್ವ ತಯಾರಿ ಮಾಡಲಾಗಿದ್ದು, 5,007 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,13 ಪರೀಕ್ಷಾ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಪ್ರತೀ ಪರೀಕ್ಷಾ ಕೊಠಡಿಯಲ್ಲಿ 20 ಮಕ್ಕಳಿಗೆ ಪರೀಕ್ಷೆ ಬರೆಯಲು ಅನುಕೂಲ ಮಾಡಲಾಗಿದೆ. ಪುತ್ತೂರು ತಾಲೂಕಿನಲ್ಲಿ 4,970 ಮಕ್ಕಳು ಪರೀಕ್ಷೆ ಬರೆಯಬೇಕಾಗಿತ್ತು. ಆದರೆ, ರಾಜ್ಯ ಸರ್ಕಾರದ ಸೂಚನೆಯಂತೆ ವಿದ್ಯಾರ್ಥಿಗಳು ಪ್ರಸ್ತುತ ಇರುವ ಸ್ಥಳಗಳಲ್ಲಿಯೇ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡುವ ಹಿನ್ನೆಲೆಯಲ್ಲಿ, ಇತರ ತಾಲೂಕು - ಜಿಲ್ಲೆಗಳ 37 ಮಕ್ಕಳು ಪುತ್ತೂರು ತಾಲೂಕಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಹಾಗಾಗಿ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದರು.
320 ಮಂದಿ ಶಿಕ್ಷಕರ ವ್ಯವಸ್ಥೆ: ಎಸೆಸೆಲ್ಸಿ ಪರೀಕ್ಷೆಗೆ ಸಂಬಂಧಿಸಿ 320 ಶಿಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. ಅದರಲ್ಲಿ 268 ಮಂದಿ ಶಿಕ್ಷಕರು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಾಗಿ ಕೆಲಸ ಮಾಡಲಿದ್ದಾರೆ. 13 ಮಂದಿ ಅಧೀಕ್ಷಕರಾಗಿ, 13 ಮಂದಿ ಉಪ ಅಧೀಕ್ಷಕರಾಗಿ ಇನ್ನೂ 13 ಮಂದಿ ಮೊಬೈಲ್ ಸ್ವಾಧೀನ ಅಧಿಕಾರಿಗಳಾಗಿ ಹಾಗೂ 13 ಮಂದಿ ಜಾಗೃತ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಎಲ್ಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ಮಾಡಲಾಗಿದ್ದು, ಇದರೊಂದಿಗೆ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯ ಸಿಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.
11 ಶಾಲೆಯ 70 ಮಕ್ಕಳು ಕೇರಳ ರಾಜ್ಯದವರು: ಪುತ್ತೂರು ತಾಲೂಕು ಮತ್ತು ಕೇರಳ ರಾಜ್ಯದ ಗಡಿ ಭಾಗದ 11 ಪ್ರೌಢಶಾಲೆಗಳಲ್ಲಿನ 70 ವಿದ್ಯಾರ್ಥಿಗಳು ಪ್ರಸ್ತುತ ಕೇರಳ ರಾಜ್ಯದಲ್ಲಿದ್ದಾರೆ. ಈ ಮಕ್ಕಳು ಪುತ್ತೂರು ತಾಲೂಕಿನ ಶಾಲೆಗಳಲ್ಲಿ ಕಲಿಯುತ್ತಿದ್ದರೂ, ಕೇರಳ ರಾಜ್ಯದ ನಿವಾಸಿಗಳಾಗಿದ್ದಾರೆ. ಪ್ರಸ್ತುತ ಕರ್ನಾಟಕ - ಕೇರಳ ರಾಜ್ಯದ ಗಡಿ ಬಂದ್ ಆಗಿದೆ. ಹಾಗಾಗಿ ಈ 70 ಮಕ್ಕಳು ಪರೀಕ್ಷೆ ಬರೆಯಲು ಕೇರಳ ರಾಜ್ಯದ ಅನುಮತಿಯೂ ಬೇಕಾಗಿದೆ. ಇದು ರಾಜ್ಯ ಮಟ್ಟದಲ್ಲಿ ತೀರ್ಮಾನವಾಗಬೇಕಾಗಿದೆ. ಈ ಬಗ್ಗೆ ನಮಗೆ ಇದುವರೆಗೆ ಯಾವುದೇ ಸ್ಪಷ್ಟ ಮಾಹಿತಿಗಳು ಬಂದಿಲ್ಲ ಎಂದರು.
ಉಪಹಾರದ ವ್ಯವಸ್ಥೆ: 10ನೇ ತರಗತಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಸಾರಿಗೆ ಇಲಾಖೆಯಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಇಲಾಖೆ ಮಾಹಿತಿ ನೀಡಿದೆ. ಇದರೊಂದಿಗೆ ಪರೀಕ್ಷಾ ಕೇಂದ್ರದ ಆವರಣದೊಳಗೆ ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.