ಮಂಗಳೂರು : ಅಪಘಾತದಲ್ಲಿ ಮೃತಪಟ್ಟ ಪುತ್ರನ ಹೆಸರಿನಲ್ಲಿದ್ದ 15 ಲಕ್ಷ ರೂ. ವಿಮಾ ಹಣವನ್ನೇ ವಕೀಲನೊಬ್ಬ ಲಪಟಾಯಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಬಜ್ಪೆ ನಿವಾಸಿ ಶರಣ್ ಜಿ ಡಿ ಎಂಬ ಯುವಕ 2019ರ ಜ.1ರಂದು ಬೆಂಗಳೂರಿನ ಪೀಣ್ಯ ಬಳಿ ಅಪಘಾತಕ್ಕೆ ಬಲಿಯಾಗಿದ್ದ. ಪರಿಹಾರಕ್ಕಾಗಿ ಹೆತ್ತವರು ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಇದಕ್ಕಾಗಿ ತಮ್ಮ ಸಂಬಂಧಿ ಪದ್ಮನಾಭ್ ಎಂಬ ವಕೀಲರನ್ನು ನೇಮಿಸಿದ್ದರು.
ಆತ ನ್ಯಾಯಾಲಯದಲ್ಲಿ ವಾದಿಸಲು ದಾಖಲೆಗಳ ಅವಶ್ಯಕತೆ ಇದೆಯೆಂದು ನಂಬಿಸಿ ಮೃತ ಯುವಕನ ಪೋಷಕರಿಂದ ಖಾಲಿ ಹಾಳೆಗಳ ಮೇಲೆ ಸಹಿ ಪಡೆದುಕೊಂಡಿದ್ದ. ಅಲ್ಲದೆ ಅವರ ಭಾವಚಿತ್ರಗಳು, ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಇತರ ದಾಖಲೆಗಳನ್ನು ಕೂಡ ಪಡೆದಿದ್ದ ಎಂದು ಆರೋಪಿಸಲಾಗಿದೆ.
ಮಂಗಳೂರಿನ ಗ್ರಾಹಕರ ನ್ಯಾಯಾಲಯದಲ್ಲಿ 2021ರ ಜು.20ರಂದು ಪ್ರಕರಣ ಇತ್ಯರ್ಥಗೊಂಡಿದೆ. ಪರಿಹಾರ ಬಾಬ್ತು 15 ಲಕ್ಷ ರೂ. ನೀಡಲು ಆದೇಶವಾಗಿತ್ತು. ಅದರಂತೆ ವಿಮಾ ಸಂಸ್ಥೆ ಸೆ.9ರಂದು ಚೆಕ್ ಮೂಲಕ ಹಣ ನೀಡಿಲು ಮುಂದಾಗಿತ್ತು.
ಹೀಗಾಗಿ, ಕಕ್ಷಿದಾರರ ಸಹಿ ಅಗತ್ಯವಿದ್ದ ಕಾರಣ ಪೋಷಕರನ್ನ ಕರೆಯಿಸಿ ಸಹಿ ಪಡೆದಿದ್ದ. ಆದರೆ, ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗಿರುವ ಕುರಿತು ವಕೀಲ ಪೋಷಕರಿಗೆ ತಿಳಿಸದೆ ಚೆಕ್ ತನ್ನಲ್ಲೇ ಇರಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ.
ಜೊತೆಗೆ ಚೆಕ್ನಲ್ಲಿ ಸಹಿ ಮಾಡಿರುವುದರಲ್ಲಿ ದೋಷವಿದೆ. ಹೀಗಾಗಿ, ಚೆಕ್ ಅನ್ನು ಮರಳಿ ವಿಮಾ ಕಂಪನಿಗೆ ಕಳುಹಿಸಲಾಗಿದೆ ಎಂದು ಸುಳ್ಳು ಹೇಳಿ ವಂಚಿಸಿದ್ದ ಎಂದು ಮೃತ ಯುವಕನ ಪೋಷಕರು ಆರೋಪಿಸಿದ್ದಾರೆ.
ಮೃತ ಯುವಕನ ತಾಯಿಯ ಹೆಸರಲ್ಲಿ ಅಂಚೆ ಕಚೇರಿಯಲ್ಲಿ ಖಾತೆ ತೆರೆದಿದ್ದ ವಕೀಲ ಅದೇ ಖಾತೆಗೆ ಚೆಕ್ ಹಣ ಸಂದಾಯ ಮಾಡಿದ್ದ. ಮೊದಲು 15 ಲಕ್ಷ ಜಮಾವಣೆಯಾದ ಕುರಿತು ಮೊಬೈಲ್ಗೆ ಸಂದೇಶ ಬಂದಾಗ ನಿರ್ಲಕ್ಷಿಸಿದ್ದರು.
ಆದರೆ, ಅದೇ ಖಾತೆಯಿಂದ 5 ಲಕ್ಷ ಹಾಗೂ 10 ಲಕ್ಷ ರೂಪಾಯಿ ವರ್ಗಾವಣೆಯಾಗಿರುವ ಕುರಿತು ಸಂದೇಶ ಬಂದಿತ್ತು. ಇದರಿಂದ ಅನುಮಾನಗೊಂಡ ಪೋಷಕರು, ಪೋಸ್ಟ್ ಆಫೀಸ್ನಲ್ಲಿ ವಿಚಾರಿಸಿದಾಗ ತಮ್ಮ ಹೆಸರಲ್ಲಿ ಉಳಿತಾಯ ಖಾತೆ ತೆರೆದಿರುವುದು ತಿಳಿದು ಬಂದಿದೆ.
ಈ ಹಿನ್ನೆಲೆ ವಂಚನೆಗೊಳಗಾದ ಮೃತ ಯುವಕನ ಪೋಷಕರು ಬಂದರು ಪೊಲೀಸರು ಠಾಣೆಯಲ್ಲಿ ವಕೀಲನ ವಿರುದ್ಧ ದೂರು ದಾಖಲಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ವಕೀಲ ತಲೆಮರೆಸಿಕೊಂಡಿದ್ದು, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ.
ಇದನ್ನೂ ಓದಿ: ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ: ತಪ್ಪಿಸಿಕೊಳ್ಳಲು ಯತ್ನಿಸಿದ ವ್ಯಕ್ತಿ ಅನುಮಾನಾಸ್ಪದ ಸಾವು!