ಮಂಗಳೂರು: ಟಿವಿ ಕಾರ್ಯಕ್ರಮವೊಂದರಲ್ಲಿ ಹಿಂದೂ ಧರ್ಮದ ಪುರೋಹಿತರು, ಜ್ಯೋತಿಷಿಗಳ ಬಗ್ಗೆ ಮಾನಹಾನಿಕರವಾಗಿ ವರ್ತಿಸಿ, ಅವರಿಗೆ ಧಕ್ಕೆ ತರುವಂತೆ ಕೀಳು ಮಟ್ಟದಲ್ಲಿ ಅಪಪ್ರಚಾರ ಮಾಡಿರುವ ಖಾಸಗಿ ಚಾನೆಲ್ನ ನಿರೂಪಕ ವಾಲ್ಟರ್ ನಂದಳಿಕೆ ಹಾಗೂ ಸಿನಿಮಾ ಕಲಾವಿದ ಅರವಿಂದ ಬೋಳಾರ್ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಕಾವೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಕುಂಜತ್ ಬೈಲ್ ನಿವಾಸಿ ಶಿವರಾಜ್ ಎಂಬುವವರು ಈ ದೂರು ದಾಖಲಿಸಿದ್ದು, ಭಾನುವಾರ ರಾತ್ರಿ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿರುವ ನಂದಳಿಕೆ V/S ಬೋಳಾರ ''ಬರೆದೀಪಿ ಜ್ಯೋತಿಷ್ಯ'' ಎನ್ನುವ ಕಾರ್ಯಕ್ರಮದಲ್ಲಿ ಪುರೋಹಿತರು, ಜ್ಯೋತಿಷಿಗಳ ಬಗ್ಗೆ ಅತ್ಯಂತ ಕೀಳುಮಟ್ಟದಲ್ಲಿ ಅವಮಾನ ಮಾಡಲಾಗಿದೆ. ಇದು ಧಾರ್ಮಿಕ, ಸಾಮಾಜಿಕ ಹಾಗೂ ಮಾನಸಿಕವಾಗಿ ಆಘಾತವಾಗಿದೆ. ವಾಲ್ಟರ್ ನಂದಳಿಕೆ ಹಾಗೂ ಅರವಿಂದ ಬೋಳಾರ್ ಬಗ್ಗೆ ನಮಗೆ ಉತ್ತಮ ಭಾವನೆಯಿದೆ. ಆದರೆ ಕಾರ್ಯಕ್ರಮದಲ್ಲಿ ಜನರ ಭಾವನೆಗೆ ಧಕ್ಕೆ ತಂದಿರೋದು ನಿಜವಾಗಿಯೂ ಖಂಡನೀಯ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ವಾಲ್ಟರ್ ನಂದಳಿಕೆ ಹಾಗೂ ಸಿನಿಮಾ ಕಲಾವಿದ ಅರವಿಂದ ಬೋಳಾರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದೀಗ ವಿಶ್ವ ಹಿಂದೂ ಪರಿಷತ್ ಬಜರಂಗದಳ ಈ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆಯಾಗಿದ್ದು, ತಕ್ಷಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು. ವಾಲ್ಟರ್ ನಂದಳಿಕೆ ಹಾಗೂ ಅರವಿಂದ ಬೋಳಾರ್ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.