ಮಂಗಳೂರು: ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿ ಗಾಂಧೀಜಿಯನ್ನೆ ಬಿಟ್ಟಿಲ್ಲ, ಇನ್ನು ನಿಮ್ಮನ್ನು ಬಿಡ್ತೇವಾ ಎಂಬ ಪ್ರಚೋದನಕಾರಿ ಹೇಳಿಕೆ ನೀಡಿದ ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ಅವರ ವಿರುದ್ದ ಪ್ರಕರಣ ದಾಖಲಾಗಿದೆ.
ಶನಿವಾರ ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಧರ್ಮೇಂದ್ರ ಅವರು ಮೈಸೂರಿನಲ್ಲಿ ದೇವಸ್ಥಾನ ಕೆಡವಿದ ವಿಚಾರದಲ್ಲಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹಿಂದೂ ವಿರೋಧಿ ವಿಚಾರದಲ್ಲಿ ಗಾಂಧೀಜಿಯನ್ನು ಬಿಟ್ಟಿಲ್ಲ, ಇನ್ನು ನಿಮ್ಮ ಬಗ್ಗೆ ಆಲೋಚನೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದುಕೊಂಡಿದ್ದೀರಾ? ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಈ ಹೇಳಿಕೆಯ ಹಿನ್ನೆಲೆಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ಲೋಹಿತ್ ಕುಮಾರ್ ಸುವರ್ಣ ಎಂಬವರು ಮುಖ್ಯಮಂತ್ರಿಗಳಿಗೆ ಕೊಲೆ ಬೆದರಿಕೆಯೊಡ್ಡಲಾಗಿದೆ ಎಂದು ಮಂಗಳೂರಿನ ಬರ್ಕೆ ಠಾಣೆಯಲ್ಲಿ ಧರ್ಮೆಂದ್ರ ಅವರ ವಿರುದ್ದ ದೂರು ದಾಖಲಿಸಿದ್ದಾರೆ.
ಅಖಿಲ ಭಾರತ ಹಿಂದೂ ಮಹಾಸಭಾ ದ ರಾಜ್ಯ ಘಟಕಕ್ಕೆ ಸಂಬಂಧಿಸಿದಂತೆ ವಿವಾದವಿದ್ದು ಲೋಹಿತ್ ಕುಮಾರ್ ಸುವರ್ಣ ಮತ್ತು ಧರ್ಮೇಂದ್ರ ಅವರು ಅಖಿಲ ಭಾರತ ಹಿಂದೂ ಮಹಾಸಭಾ ತಮ್ಮ ನೇತೃತ್ವದಲ್ಲಿ ಇದೆ ಎಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ ವಾದ -ಪ್ರತಿವಾದ ನಡೆಸುತ್ತಿರುತ್ತಾರೆ.
ಇದನ್ನು ಓದಿ:'ಗಾಂಧಿ ರಾಷ್ಟ್ರಪಿತ ಎಂದು ಸಂವಿಧಾನದಲ್ಲಿ ಉಲ್ಲೇಖವಿಲ್ಲ': ಹಿಂದೂ ಮಹಾಸಭಾ ನಾಯಕ