ಮಂಗಳೂರು: ಹೆರಿಗೆಗಾಗಿ ಆಸ್ಪತ್ರೆಗೆ ಬರುತ್ತಿದ್ದ ವಾಹನ ಕೆಟ್ಟುಹೋದ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದ ಗರ್ಭಿಣಿಯನ್ನು ಗಸ್ತು ತಿರುಗುತ್ತಿದ್ದ ಪೊಲೀಸರೇ ಇಲಾಖೆಯ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದದ್ದರು. ಆ ಸಿಬ್ಬಂದಿ ನಗರ ಪೊಲೀಸ್ ಆಯುಕ್ತರು ಅಭಿನಂದಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಸಿದ್ದೀಕ್ ಅವರ ಪತ್ನಿ ಶಾಹಿದಾ (29) ಶುಕ್ರವಾರ ಹೆರಿಗೆಗಾಗಿ ವಿಟ್ಲದಿಂದ ಮಂಗಳೂರಿಗೆ ಬರುತ್ತಿದ್ದರು. ಅಂದು ರಾತ್ರಿ 1.15ರ ಸುಮಾರಿಗೆ ಅರ್ಕುಳ ಎಂಬಲ್ಲಿ ಕಾರು ಕೆಟ್ಟುಹೋಗಿತ್ತು. ರಾತ್ರಿ ಕರ್ಫ್ಯೂ ಪರಿಣಾಮ ಯಾವುದೇ ವಾಹನಹಗಳಿಲ್ಲದೆ ಮಾರ್ಗ ಮಧ್ಯೆ ಆಸ್ಪತ್ರೆಗೆ ಹೋಗಲು ಶಾಹಿದಾ ಕುಟುಂಬಸ್ಥರು ಪರದಾಡುತ್ತಿದ್ದರು. ಈ ವೇಳೆ ಗಸ್ತು ತಿರುಗುತ್ತಿದ್ದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಎಎಸ್ಐ ಹರೀಶ್ ಹಾಗೂ ಸಿಬ್ಬಂದಿ ವಿಜಯ ಕುಮಾರ್ ಪೊಲೀಸ್ ಇಲಾಖೆಯ ವಾಹನದಲ್ಲಿಯೇ ನಗರದ ಎ.ಜೆ. ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದರು.
ಇಂದು ಶಾಹಿದಾ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ. ಪೊಲೀಸರಿಬ್ಬರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ ಪೊಲೀಸ್ ಸಿಬ್ಬಂದಿಯನ್ನು ಕರೆಸಿ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್ ಅವರು ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಪೊಲೀಸರ ಉತ್ತಮ ಕಾರ್ಯವನ್ನು ಶ್ಲಾಘಿಸಿದ್ದಾರೆ.