ಮಂಗಳೂರು: ದ.ಕ ಜಿಲ್ಲೆಯ ಪ್ರಾಂಶುಪಾಲರೊಬ್ಬರು ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದು ಅವರು ಸುರಕ್ಷಿತವಾಗಿ ಮನೆ ಸೇರಲು ಕುಟುಂಬಸ್ಥರು ಪ್ರಾರ್ಥಿಸುತ್ತಿದ್ದಾರೆ. ಜಿಲ್ಲೆಯ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಸಮೀಪದ ನಿವಾಸಿ ಜೆರೊಮ್ ಸಿಕ್ವೇರಾ ಎಸ್.ಜೆ ಅಫ್ಘಾನಿಸ್ತಾನದಲ್ಲಿದ್ದು, ಮಂಗಳವಾರ ರಾತ್ರಿ ಅಣ್ಣ ಬೆರ್ನಾಡ್ ಸಿಕ್ವೇರಾ ಅವರಿಗೆ ಕರೆಮಾಡಿ ತಾನು ಸುರಕ್ಷಿತವಾಗಿರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಭಾನುವಾರ ಊರಿಗೆ ಬರಲೆಂದು ಏರ್ಪೋರ್ಟ್ಗೆ ಬಂದಿದ್ದರೂ ಪ್ರಯಾಣ ಸಾಧ್ಯವಾಗದೆ ಅಲ್ಲೇ ಉಳಿದುಕೊಂಡಿದ್ದ ಬಗ್ಗೆ ಮನೆಗೆ ಮಾಹಿತಿ ಮುಟ್ಟಿಸಿದ್ದಾರೆ. ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಕಲ್ಕುರಿ ಎಂಬಲ್ಲಿನ ನಿವಾಸಿಗಳಾದ ಅಲ್ಫೊನ್ ಸಿಕ್ವೇರಾ ಮತ್ತು ಐರಿನ್ ಸಿಕ್ವೇರಾ ಅವರ 7 ಮಂದಿ ಮಕ್ಕಳಲ್ಲಿ ಜೆರೊಮ್ ಸಿಕ್ವೇರಾ(52) ಐದನೇಯವರು. ಸಿದ್ಧಕಟ್ಟೆ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಮೂಡಬಿದ್ರೆ ಮಹಾವೀರ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪೂರೈಸಿದ್ದ ಅವರು ನಂತರ ದೇಶ-ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು. ನಂತರ ಜಾರ್ಖಂಡ್, ದೆಹಲಿ ಮೊದಲಾದೆಡೆ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದರು.
ವಿಮಾನ ನಿಲ್ದಾಣ ತಾಲಿಬಾನಿಗಳ ವಶ
ಈ ಹಿಂದೆ ಅಫ್ಘಾನಿಸ್ತಾನದಲ್ಲಿ 5 ವರ್ಷಗಳ ಕಾಲವಿದ್ದ ಜೆರೊಮ್ ಸಿಕ್ವೇರಾ ನಂತರ ಜಾಖಂಡ್ನಲ್ಲಿದ್ದು ಕಳೆದ ಡಿಸೆಂಬರ್ನಲ್ಲಿ ಊರಿಗೆ ಬಂದಿದ್ದರು. ಮತ್ತೆ ಅಫ್ಘಾನಿಸ್ತಾನಕ್ಕೆ ಹೋಗಿದ್ದ ಅವರು ಕಳೆದ ಜನವರಿಯಿಂದ ಕಾಬೂಲ್ನಲ್ಲಿರುವ ಅಂತರಾಷ್ಟ್ರೀಯ ಎನ್ಜಿಒ ಜೆಸ್ಯೂಟ್ ರೆಪ್ಯೂಜಿ ಸರ್ವಿಸಸ್(ಜೆಆರ್ಎಸ್)ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ನಡೆಸುತ್ತಿರುವುದರಿಂದ ಅಲ್ಲಿರುವ ಭಾರತೀಯರನ್ನು ಭಾರತೀಯ ವಾಯುಸೇನೆ ತಾಯ್ನಾಡಿಗೆ ಕಳುಹಿಸುತ್ತಿದ್ದು, ಈ ನಡುವೆ ಊರಿಗೆ ಬರಲೆಂದು ಭಾನುವಾರ ಜೆರೊಮ್ ಸಿಕ್ವೇರಾ ತನ್ನ ಸ್ನೇಹಿತ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಿವಾಸಿ ರಾಬರ್ಟ್ ರೊಡ್ರಿಗಸ್ ಅವರೊಂದಿಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದರೂ ಆ ಹೊತ್ತಿಗೆ ತಾಲಿಬಾನಿಗರು ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡು ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಚದುರಿಸಿದ ಪರಿಣಾಮ ಊರಿಗೆ ಬರಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಕಾಬೂಲ್ ವಿಶ್ವವಿದ್ಯಾಲಯದಲ್ಲಿ ಸಿಲುಕಿಕೊಂಡ ಭಾರತೀಯ ಶಿಕ್ಷಕರು.. ಸ್ಥಳಾಂತರಕ್ಕಾಗಿ ಸರ್ಕಾರದ ಮೊರೆ