ಮಂಗಳೂರು (ದ.ಕ): ನಗರದ ಕೊಡಿಯಾಲ್ ಬೈಲ್ನಲ್ಲಿರುವ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಆರಂಭವಾಗಿದೆ. ಸಭೆ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಬಿಜೆಪಿಯನ್ನು ಇನ್ನಷ್ಟು ಬಲಗೊಳಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಯಾವುದೇ ಚುನಾವಣೆಯನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಗ್ರಾಮ ಪಂಚಾಯಿತಿ ಚುನಾವಣೆಯಿಂದ ಹಿಡಿದು ಎಲ್ಲ ಚುನಾವಣೆಯನ್ನೂ ಗಂಭೀರವಾಗಿ ಪರಿಗಣಿಸಿದಾಗ ಮಾತ್ರ ಗೆಲುವು ಪಡೆಯಲು ಸಾಧ್ಯ ಎಂಬ ಕಿವಿಮಾತು ಹೇಳಲು ಬಯಸುತ್ತೇನೆ ಎಂದರು.
ಶಿರಾ ಹಾಗೂ ಆರ್ಆರ್ ನಗರ ಚುನಾಚಣೆ ಕುರಿತು ಮಾತನಾಡಿದ ಅವರು, ಆರ್ಆರ್ ನಗರದಲ್ಲಿ ಸುಮಾರು ಕನಿಷ್ಠ 40ಸಾವಿರ ಮತಗಳ ಅಂತರದಲ್ಲಿ ಹಾಗೂ ಶಿರಾದಲ್ಲಿ 22 ರಿಂದ 25 ಸಾವಿರ ಮತಗಳ ಅಂತರದಿಂದ ಗೆಲ್ಲಲಿದ್ದೇವೆ ಎಂದರು.
ಇವಿಷ್ಟೇ ಅಲ್ಲದೆ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದಲ್ಲೂ ಬಿಜೆಪಿ ಜಯಸಾಧಿಸಲಿದೆ. ಫಲಿತಾಂಶ ಬಂದಾಗ ಎಲ್ಲಾ ತಿಳಿಯಲಿದೆ ಎಂದರು ಭರವಸೆ ವ್ಯಕ್ತಪಡಿಸಿದರು. ರಾಜ್ಯದ ಹಲವು ಜಿಲ್ಲೆಗಳಲ್ಲಿ ನಮಗೆ ಶಕ್ತಿ ಇರಲಿಲ್ಲ. ಬಳಿಕ 15 ಮಂದಿ ಶಾಸಕರು ನಮ್ಮ ಪಕ್ಷಕ್ಕೆ ಬಂದ ಬಳಿಕ ಅಲ್ಲೆಲ್ಲಾ ಶಕ್ತಿ ಬಂದಿದೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಪ್ರಹ್ಲಾದ್ ಜೋಶಿ, ಸಚಿವ ಸಿಟಿ ರವಿ, ಕೋಟ ಶ್ರೀನಿವಾಸ ಪೂಜಾರಿ, ಜಗದೀಶ್ ಶೆಟ್ಟರ್, ಆರ್.ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.