ಮಂಗಳೂರು (ದಕ್ಷಿಣ ಕನ್ನಡ):ಸಾವರ್ಕರ್ ಫೋಟೋವನ್ನು ವಿವಿ ಕಾಲೇಜಿನ ಕೊಠಡಿಯಲ್ಲಿ ಹಾಕಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ವಿದ್ಯಾರ್ಥಿಗಳ ಮೇಲೆ ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸಮಾನಮನಸ್ಕ ವಿದ್ಯಾರ್ಥಿಗಳು ವಿವಿ ಕಾಲೇಜಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ.
ಮೂರ್ನಾಲ್ಕು ದಿನಗಳ ಹಿಂದೆ ಹಂಪನಕಟ್ಟೆಯ ವಿವಿ ಕಾಲೇಜಿನ ಕೊಠಡಿಯಲ್ಲಿ ಬೋರ್ಡ್ ಮೇಲೆ ಸಾವರ್ಕರ್ ಫೋಟೋ ಅನ್ನು ವಿದ್ಯಾರ್ಥಿಯೊಬ್ಬ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ಇದು ಗಮನಕ್ಕೆ ಬಂದ ತಕ್ಷಣ ಪ್ರಾಂಶುಪಾಲೆ ಅನುಸೂಯ ಅವರು ಸಾವರ್ಕರ್ ಫೋಟೋ ತೆಗೆದಿದ್ದರು. ಈ ವಿಚಾರದಲ್ಲಿ ಇಂದು ಮಧ್ಯಾಹ್ನ ಎರಡು ಗುಂಪುಗಳ ನಡುವೆ ವಾದ-ವಿವಾದ ಆರಂಭವಾಗಿ ಘರ್ಷಣೆ ನಡೆದಿದೆ. ಘಟನೆಯಲ್ಲಿ ಕೆಲ ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ನೂಪುರ್ ಶರ್ಮಾ, ನವೀನ್ ಜಿಂದಾಲ್ ಬಂಧನಕ್ಕೆ ಎಸ್ಡಿಪಿಐ ಆಗ್ರಹ
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ವಿದ್ಯಾರ್ಥಿ ಮುಖಂಡ ಸವಾದ್ ಕಲ್ಲರ್ಪೆ, ಮಂಗಳೂರಿನ ವಿವಿ ಕಾಲೇಜಿನಲ್ಲಿ ಸಾವರ್ಕರ್ ಭಾವಚಿತ್ರವನ್ನು ವಿದ್ಯಾರ್ಥಿಯೊಬ್ಬ ಹಾಕಿದ್ದು, ಈ ವಿಚಾರದಲ್ಲಿ ಕ್ರಮ ತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳ ತಂಡ ಪ್ರಾಂಶುಪಾಲರಿಗೆ ಮನವಿಯನ್ನು ಸಲ್ಲಿಸಿದ್ದರು. ಅದರಲ್ಲಿ 'ದೇಶದ್ರೋಹಿ ಸಾವರ್ಕರ್' ಎಂದು ಬರೆದಿರುವುದಕ್ಕೆ ಕೆಲ ವಿದ್ಯಾರ್ಥಿಗಳಲ್ಲಿ ಪ್ರಾಂಶುಪಾಲರು ಕ್ಷಮಾಪಣಾ ಪತ್ರ ಬರೆಸಿದ್ದಾರೆ. ಬಳಿಕ ವಿದ್ಯಾರ್ಥಿಗಳ ಮೇಲೆ ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಕ್ಷಮಾಪಣಾ ಪತ್ರ ಬರೆಸಿದ ಪ್ರಾಂಶುಪಾಲರನ್ನು ಅಮಾನತು ಮಾಡಬೇಕು. ಹಲ್ಲೆ ನಡೆಸಿದ ವಿದ್ಯಾರ್ಥಿಗಳನ್ನು ಬಂಧಿಸಬೇಕು' ಎಂದು ಒತ್ತಾಯಿಸಿದರು.