ಮಂಗಳೂರು : ಮಂಗಳೂರು ನಗರದಲ್ಲಿ ಲಾಕ್ಡೌನ್ ಸಡಿಲಿಕೆ ನಡುವೆ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಸಿಟಿ ರೌಂಡ್ಸ್ ಹೊಡೆದಿದ್ದಾರೆ. ನಿಯಮ ಉಲ್ಲಂಘಿಸಿದವರಿಗೆ ಬಿಸಿ ಮುಟ್ಟಿಸಿದ್ದಾರೆ. ಜತೆಗೆ ಈ ಸಂದರ್ಭದಲ್ಲಿ ರಿಕ್ಷಾ ಸಿಗದೆ ಮನೆಗೆ ಹೋಗಲು ಪರದಾಡುತ್ತಿದ್ದ ವೃದ್ಧ ದಂಪತಿಯನ್ನು ಪೊಲೀಸ್ ವಾಹನದ ಮೂಲಕ ಕಳುಹಿಸಿಕೊಟ್ಟು ಮಾನವೀಯತೆ ಮೆರೆದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ ಲಾಕ್ಡೌನ್ ಸಡಿಲಿಕೆಯಾಗಿದೆ. ನಗರದಲ್ಲಿ ವಾಹನಗಳ ಓಡಾಟ ಹೆಚ್ಚಿರುವ ಹಿನ್ನೆಲೆ ಅನಗತ್ಯ ತಿರುಗಾಡುವವರ ನಿಯಂತ್ರಣಕ್ಕೆ ಪೊಲೀಸರು ಮುಂದಾಗಿದ್ದಾರೆ. ಈ ಹಿನ್ನೆಲೆ, ಮಂಗಳೂರಿನ ಕ್ಲಾಕ್ ಟವರ್ ಬಳಿ ಮಧ್ಯಾಹ್ನ 12:30ರ ಸಂದರ್ಭದಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ತಪಾಸಣೆ ನಡೆಸಲಾಯಿತು. ಅನಗತ್ಯವಾಗಿ ತಿರುಗಾಡುವ ವಾಹನಗಳು, ಮಾಸ್ಕ್ ಧರಿಸದೇ ಓಡಾಟ ನಡೆಸುವವರನ್ನು ಪತ್ತೆ ಹಚ್ಚಿ ಅವರಿಗೆ ದಂಡ ವಿಧಿಸಿದರು.
ವೃದ್ಧ ದಂಪತಿಗೆ ಪೊಲೀಸ್ ವಾಹನ ವ್ಯವಸ್ಥೆ : ಮಂಗಳೂರು ನಗರಕ್ಕೆ ಬಂದಿದ್ದ ಕುಲಶೇಖರದ ದಂಪತಿಗೆ ಮರಳಿ ಹೋಗಲು ರಿಕ್ಷಾ ವ್ಯವಸ್ಥೆ ಸಿಕ್ಕಿರಲಿಲ್ಲ. ವೃದ್ಧ ವ್ಯಕ್ತಿಗೆ ಪೈಲೇರಿಯಾ ಆಗಿದ್ದು, ನಡೆಯಲು ಕಷ್ಟವಾಗಿತ್ತು. ಈ ವಿಚಾರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರ ಗಮನಕ್ಕೆ ಬಂದಿತು. ಬಳಿಕ ಅವರೇ ಪೊಲೀಸ್ ವಾಹನದಲ್ಲಿಯೇ ವೃದ್ಧ ದಂಪತಿಯನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಪೊಲೀಸರಿಗೆ ಸೆಲ್ಯೂಟ್ ಹೊಡೆದ ನಿರ್ಗತಿಕ : ಮಂಗಳೂರು ನಗರದಲ್ಲಿ ಪೊಲೀಸ್ ಕಮಿಷನರ್ ರೌಂಡ್ಸ್ ಮಾಡುತ್ತಿದ್ದ ವೇಳೆ ನಿರ್ಗತಿಕನೊಬ್ಬ ಪೊಲೀಸ್ ಕಮಿಷನರ್ ಸೇರಿದಂತೆ ಇತರ ಅಧಿಕಾರಿಗಳಿಗೆ, ಪೊಲೀಸರಿಗೆ ಸೆಲ್ಯೂಟ್ ಹೊಡೆದಿದ್ದು ಎಲ್ಲರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಆತನನ್ನು ಕರೆದು ಪೊಲೀಸ್ ಕಮಿಷನರ್ ಆತನ ಬಗ್ಗೆ ವಿಚಾರಿಸಿದರು.
ಹಲವು ಕಾರುಗಳ ಟಿಂಟ್ ತೆರವು : ಕಾರ್ ಗ್ಲಾಸ್ಗೆ ಟಿಂಟ್ ಬಳಸಿ ಓಡಾಟ ಮಾಡುವವರನ್ನು ಪತ್ತೆ ಹಚ್ಚಿದ ಪೊಲೀಸರು ಕಾರಿನ ಟಿಂಟ್ಗಳನ್ನು ತೆರವು ಮಾಡಿದರು. ಹಲವು ಕಾರುಗಳಲ್ಲಿದ್ದ ಟಿಂಟ್ಗಳನ್ನು ತೆರವುಗೊಳಿಸಿದ ಪೊಲೀಸರು ಕಾರಿಗೆ ದಂಡ ವಿಧಿಸಿ ಕಳುಹಿಸಿದ್ದಾರೆ.
ಇದನ್ನೂ ಓದಿ: ಪುತ್ತೂರು: ಒಂದೇ ಗ್ರಾಮದಲ್ಲಿ ಅಪಾಯದ ಸ್ಥಿತಿಯಲ್ಲಿದೆ 3 ಸೇತುವೆಗಳು