ಮಂಗಳೂರು: ಕರ್ನಾಟಕ ಸರ್ಕಾರದ 6ನೇ ವೇತನ ಆಯೋಗವು ಗುಡ್ ಫ್ರೈಡೇ ದಿನದ ಸಾರ್ವಜನಿಕ ರಜೆಯನ್ನು ರದ್ದು ಪಡಿಸುವುದಾಗಿ ಶಿಫಾರಸು ಮಾಡಿರುವ ಬಗ್ಗೆ ವರದಿಯಾಗಿದ್ದು, ಗುಡ್ ಫ್ರೈಡೆಯನ್ನು ಸರ್ಕಾರಿ ರಜೆಯಾಗಿ ಘೋಷಣೆ ಮಾಡಲು ಕ್ರೈಸ್ತ ಸಮುದಾಯ ಬೇಡಿಕೆ ಇಡುತ್ತಿದೆ ಎಂದು ಕ್ಯಾಥೋಲಿಕ್ ಸಭಾ ಅಧ್ಯಕ್ಷ ರಾಲ್ಫಿ ಡಿಕೋಸ್ತಾ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಗುಡ್ ಫ್ರೈಡೆ ರಜೆಯನ್ನು ರದ್ದುಪಡಿಸಲು ಮುಂದಾಗಿದ್ದು, ಯಾವುದೇ ಕಾರಣಕ್ಕೂ ಗುಡ್‌ಫ್ರೈಡೆ ರಜೆಯನ್ನು ರದ್ದು ಪಡಿಸಬಾರದಾಗಿ ಸಮಸ್ತ ಕ್ರೈಸ್ತ ಬಾಂಧವರ ಪರವಾಗಿ ಕ್ಯಾಥೋಲಿಕ್ ಸಭಾ ಮಂಗಳೂರು ಪ್ರಾಂತ್ಯ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಿದೆ. ಗುಡ್ ಫ್ರೈಡೆ ಕ್ರೈಸ್ತರಿಗೆ ಪವಿತ್ರ ದಿನವಾಗಿದೆ. ಈ ದಿನ ಏಸುಕ್ರಿಸ್ತರು ಶಿಲುಬೆಯನ್ನೇರಿ ಮರಣವನ್ನಪ್ಪಿದ ದಿನ. ಈ ದಿನ ಎಲ್ಲಾ ಕ್ರೈಸ್ತ ಸಮುದಾಯದವರು ಉಪವಾಸ ಹಾಗೂ ವೃತಾಚರಣೆ ಮಾಡಿ ಪವಿತ್ರ ಗುರುವಾರ, ಪವಿತ್ರ ಶುಕ್ರವಾರ ಆಚರಣೆ ಮಾಡುತ್ತಾರೆ ಎಂದು ಹೇಳಿದರು.
ಕ್ಯಾಥೋಲಿಕ್ ಸಭಾ ಈಗಾಗಲೇ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವಾನ್ ಡಿಸೋಜ, ಮಾಜಿ ಶಾಸಕ ಜೆ.ಆರ್.ಲೋಬೊ ಹಾಗೂ ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಇವರ ಮುಖಾಂತರ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಯವರಿಗೆ ಈಗಾಗಲೇ ಮನವಿಯನ್ನು ಸಲ್ಲಿಸಲಾಗಿದೆ ಎಂದರು.