ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಇಂದು ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ಇತರೆಡೆಗಳಂತೆ ಮನೆ ಮನೆಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಕ್ರಮ ಇಲ್ಲ. ಇಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ನಡೆದರೆ ಕೆಲವೇ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.
ಗಣೇಶ ಚತುರ್ಥಿ ಪ್ರಯುಕ್ತ ಕೆಲವೊಂದು ಪ್ರದೇಶಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತದೆ. ಇದರಲ್ಲಿ ಮಂಗಳೂರಿನ ನೆಹರು ಮೈದಾನದಲ್ಲಿ, ಸಂಘನಿಕೇತನದಲ್ಲಿ, ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಬಂಟರ ಭವನದಲ್ಲಿ, ಫರಂಗಿಪೇಟೆ, ಜೆಪ್ಪಿನಮೊಗರು ಸೇರಿದಂತೆ ಹಲವೆಡೆ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತದೆ. ಇಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ಕೆಲವೆಡೆ ನಿನ್ನೆ ಸಂಜೆಯ ವೇಳೆಗೆ, ಕೆಲವೆಡೆ ಇಂದು ಮುಂಜಾನೆ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇಂದು ಮುಂಜಾನೆಯಿಂದಲೇ ಪೂಜೆ ಪುನಸ್ಕಾರ ಆರಂಭವಾಗಿದ್ದು, ಕೆಲವೆಡೆ ಇಂದು ರಾತ್ರಿ, ಕೆಲವೆಡೆ ಮೂರನೇ ದಿನಕ್ಕೆ ಗಣೇಶ ಮೂರ್ತಿಯ ನಿಮಜ್ಜನ ಮಾಡಲಾಗುತ್ತದೆ.
ಇನ್ನು ಸಾರ್ವಜನಿಕರು ಗಣೇಶ ಚತುರ್ಥಿ ಪ್ರಯುಕ್ತ ಸಾರ್ವಜನಿಕ ಗಣೇಶೋತ್ಸವಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಮನೆಯಲ್ಲಿ ದೇವರ ಫೋಟೋಗಳನ್ನು ಹೂವುಗಳಿಂದ ಸಿಂಗರಿಸಿ ಕಬ್ಬನ್ನು ಕಟ್ಟಿ ಹಬ್ಬದಡುಗೆ ಮಾಡಿ ಸಂಭ್ರಮಿಸುತ್ತಾರೆ.
ಕರಾವಳಿಯಲ್ಲಿ ವಿಶೇಷ ಈ ತೆನೆ ಹಬ್ಬ: ಗಣೇಶ ಚತುರ್ಥಿಗೆ ಕೆಲವೆಡೆ ತೆನೆ ಹಬ್ಬ ಆಚರಿಸುತ್ತಾರೆ. ಈ ಋತುವಿನ ಹೊಸ ತೆನೆಯಲ್ಲಿ ಊಟ ಮಾಡುವ ಈ ಹಬ್ಬವನ್ನು ಆಚರಿಸಲು ಪುದ್ದರ್ ಎಂಬ ಹಬ್ಬ ಇದ್ದರೂ ಹೆಚ್ಚಿನವರು ಗಣೇಶ ಚತುರ್ಥಿ ದಿನವೇ ತೆನೆಹಬ್ಬ ಆಚರಿಸುತ್ತಾರೆ. ಸಾರ್ವಜನಿಕ ಗಣೇಶೋತ್ಸವ ನಡೆಯುವ ಸ್ಥಳದಲ್ಲಿ ಮತ್ತು ದೇವಸ್ಥಾನಗಳಲ್ಲಿ ಭಕ್ತರಿಗೆ ತೆನೆಯನ್ನು ವಿತರಿಸಲಾಗುತ್ತದೆ.
ತೆನೆ ಹಬ್ಬದ ಕ್ರಮ: ತೆನೆ ಹಬ್ಬದ ('ಕುರಲ್‌ಪರ್ಬ') ದಿನ ಬೆಳಗ್ಗೆಯೇ ಹೆಂಗಸರು ಮನೆಯನ್ನು ಸಾರಿಸಿ ಶುದ್ಧಗೊಳಿಸುತ್ತಾರೆ. ಮನೆಯ ಯಜಮಾನ ಸ್ನಾನಮಾಡಿ ಮಡಿಯುಟ್ಟು ಗದ್ದೆಗೆ ಹೋಗಿ ತೆನೆಯನ್ನು ಒಂದು 'ಸೂಡಿ'ಯಷ್ಟು ಕಿತ್ತು ತುದಿ ಬಾಳೆಎಲೆಯಲ್ಲಿಟ್ಟು ತಲೆಯಲ್ಲಿ ಹೊತ್ತು ತರುತ್ತಾನೆ. ಕೆಲವೊಮ್ಮೆ ತೆನೆಯನ್ನು ಮುಂಚಿನ ದಿನ ಸಾಯಂಕಾಲವೇ ತರುವುದೂ ಉಂಟು. ಹಾಗೆ ತಂದು ಬಾವಿಯ ದಂಡೆ, ಇಲ್ಲವೇ ತುಳಸಿ ಕಟ್ಟೆಯ ಬಳಿಯಲ್ಲಿಯೋ ಇಡಲಾಗುತ್ತದೆ. ಹಾಲು ಬರುವ ಮರದಡಿಯಲ್ಲಿ ತೆನೆಯನ್ನು ಇಡಬೇಕೆಂಬ ನಂಬಿಕೆಯೂ ಇದೆ. ಅದರಂತೆ ಮನೆಯ ಆವರಣದೊಳಗಿರುವ ಹಲಸಿನ ಮರದಡಿಯಲ್ಲೂ ಸಂಗ್ರಹಿಸಿಡುತ್ತಾರೆ.
ಅದರೊಂದಿಗೆ ಮಾವಿನತುದಿ, ಹಲಸಿನತುದಿ, ಗರಿಕೆಹುಲ್ಲು, 'ಪಚ್ಚೆಕುರಲ್', 'ದಡ್ಡಲ್ ಮರದ ಎಲೆ', 'ಇಟ್ಟೆವು', ಅಶ್ವತ್ಥ, ಅತ್ತಿ, ಇತ್ತಿ, 'ಬಲಿಪಬಳ್ಳಿ', 'ಗೋಳಿ', ಹೂವು ಸಹಿತವಾದ ಸೌತೆ ಮಿಡಿ, ಬಿದಿರುಸೊಪ್ಪು, ತುಳಸಿ, ಗೌರಿಹೂವು, ಗಂಧ, ಕುಂಕುಮ ಇತ್ಯಾದಿಗಳನ್ನು ಸಂಗ್ರಹಿಸಿ ಇಡುತ್ತಾರೆ. ಹೀಗೆ ಎಲ್ಲಾ ವಸ್ತುಗಳನ್ನು ಜೋಡಿಸಿ ಇಡುತ್ತಾರೆ. ಯಜಮಾನ ಆ ವಸ್ತುಗಳಿಗೆ ಧೂಪ ಆರತಿ ಮಾಡಿ ಅವುಗಳನ್ನು ಶುದ್ಧಗೊಳಿಸುತ್ತಾನೆ. ನಂತರ ಅವುಗಳನ್ನೆಲ್ಲ ಮನೆಯೊಳಗೆ ತರುವಾಗ ಯಜಮಾನ ತೆನೆಗಳನ್ನು ಹಿಡಿದು ಮುಂದುಗಡೆಯಿಂದಲೂ, ಉಳಿದವರು ಉಳಿದ ವಸ್ತುಗಳನ್ನು ಹಿಡಿದುಕೊಂಡು ಆತನನ್ನು ಹಿಂಬಾಲಿಸುತ್ತಾರೆ. ಆಗ ಎಲ್ಲರೂ 'ಪೊಲಿ ಪೊಲಿ ಪೊಲಿ' ಎಂದು ಹೇಳುತ್ತಾ ತುಳಸಿಕಟ್ಟೆಗೆ ಒಂದು ಸುತ್ತು ಪ್ರದಕ್ಷಿಣೆ ಬಂದು ಮನೆಯೊಳಗೆ ಪ್ರವೇಶಿಸುತ್ತಾರೆ.
ಮನೆಯೊಳಗೆ ಪ್ರವೇಶಿಸುವ ಮೊದಲು ಮನೆಯ ಹೆಂಗಸರು ಯಜಮಾನನ ಪಾದ ತೊಳೆಯುತ್ತಾರೆ. ಅವುಗಳನ್ನೆಲ್ಲ ದೇವರಮಣೆಯ ಕೆಳಗೆ ಶುಚಿಗೊಳಿಸಿಟ್ಟ ಮಣೆಯ ಮೇಲೆ ಇಡಲಾಗುತ್ತದೆ. ಮಣೆಯ ಪಕ್ಕದಲ್ಲಿ ದೀಪ ಉರಿ, ತೆನೆಗಳನ್ನು 'ಕಳಸೆ' ಇಲ್ಲವೆ ಅಥವಾ ಹೊಸ 'ಬುಟ್ಟಿ'ಯಲ್ಲಿ ಇಡುತ್ತಾರೆ. ಅಲ್ಲಿಯೇ 'ಮಂತು' (ಕಡೆಗೋಲು), ಒಂದು 'ಪರ್ದತ್ತಿ' (ಪೈರು ಕೊಯ್ಯುವ ಹಲ್ಲುಗಳಿರುವ ಕತ್ತಿ) ಒಂದು 'ಸೇರು' (ಅಕ್ಕಿ, ಭತ್ತ ಮೊದಲಾದವುಗಳನ್ನು ಅಳೆಯುವ ಸಾಧನ) - ಇತ್ಯಾದಿಗಳನ್ನು ಗಂಧ ಹಚ್ಚಿ, ಜೊತೆಗೆ ಐದು ವೀಳ್ಯದೆಲೆ, ಒಂದು ಅಡಕೆ ಇಡುತ್ತಾರೆ. ಒಂದು 'ತುದಿ ಬಾಳೆಎಲೆಯಲ್ಲಿ ಒಂದು 'ಪಾವು' ಬೆಳ್ತಿಗೆ ಅಕ್ಕಿ, ಅದರ ಮೇಲೆ, ಸೌತೆ ಇಟ್ಟು, ಅದರಲ್ಲಿಯೂ ಐದು ವೀಳ್ಯದೆಲೆ, ಒಂದು ಅಡಿಕೆ ಇಡಲಾಗುತ್ತದೆ. ಒಂದು ಹರಿವೆ, ಒಂದು 'ಕರಿಕೆಸುವಿನ ದಂಟು ಅಕ್ಕಿಯ ಬದಿಯಲ್ಲಿಡುತ್ತಾರೆ. ಈ ಹರಿವೆ, ಕೆಸು, ಸೌತೆಗಳನ್ನು ನಂತರ ನಡೆಯುವ 'ಪುದ್ವಾರ್'ಗೆ ಪದಾರ್ಥಕ್ಕೆ ಬಳಲಾಗುತ್ತದೆ.
'ಕುರಲ್'ಗೆ ತೆಂಗಿನಕಾಯಿ ಒಡೆದು, ಗಂಧ ಪ್ರಸಾದ ಮುಟ್ಟಿಸಿ, ಭತ್ತ ಹಾಕುತ್ತಾರೆ. ಎಲ್ಲರೂ ಸೇರಿ ಮತ್ತೆ ತೆನೆಗಳಿಗೆ ಧೂಪ, ಆರತಿ ಬೆಳಗಿ ಈ ರೀತಿ ಪ್ರಾರ್ಥನೆ ಸಲ್ಲಿಸುತ್ತಾರೆ. ಬಳಿಕ ಭತ್ತದ ತೆನೆಯಿಂದ ಮೂರು ಇಲ್ಲವೇ ಐದು ಭತ್ತ ತೆಗೆದು ಅದರ ಸಿಪ್ಪೆ ಸುಲಿದು ಅಕ್ಕಿಯನ್ನು ಉರಿಸಿಟ್ಟ ದೀಪಕ್ಕೆ ಹಾಕುತ್ತಾರೆ. ಬಳಿಕ ಭತ್ತದಿಂದ ಅಕ್ಕಿ ಕಾಳು ತೆಗೆದು ಹಾಲಿಗೆ ಸೇರಿಸಿ ಮನೆಮಂದಿ ಕುಡಿಯುವ ಕ್ರಮವಿದೆ.
ಬಳಿಕ ಮೂರು ಮೂರು 'ತೆನೆ'ಗಳನ್ನು ಈಗಾಗಲೇ ತಿಳಿಸಿದ ವಸ್ತುಗಳಸಹಿತ 'ದಡ್ಡಲ್‌ನಾರಿ'ನಿಂದ ಕಟ್ಟುಗಳನ್ನಾಗಿ ಕಟ್ಟಿ ವಿಂಗಡಿಸಲಾಗುತ್ತದೆ. ಮುಖ್ಯವಾಗಿ ದೇವರ ಮಣೆಗೆ, ಬಾಗಿಲಿಗೆ, ಭೂತದ ಕೋಣೆಗೆ, ತುಳಸಿ ಕಟ್ಟೆಗೆ, ಬಾವಿ ದಂಡೆಗೆ, ಹಟ್ಟಿಗೆ, ತೆಂಗಿನ ಮರಕ್ಕೆ, ಹಲಸಿನ ಮರಕ್ಕೆ, ಅಕ್ಕಿ ಶೇಖರಿಸಿಡುವ ಡ್ರಮ್, ನೊಗನೇಗಿಲುಗಳಿಗೆ ಇತ್ಯಾದಿಗಳಿಗೆಲ್ಲ ಅದನ್ನು ಕಟ್ಟಲಾಗುತ್ತದೆ. ಹೀಗೆ ತೆನೆ ಕಟ್ಟುವ ಕೆಲಸ ಮುಗಿದು, ಮಧ್ಯಾಹ್ನ ರುಚಿಕರವಾದ ತರಕಾರಿ ಅಡುಗೆಯನ್ನು ಎಲ್ಲರೂ ಸವಿಯುತ್ತಾರೆ.
ತುಳುವರ ಆಚರಣೆ ವಿಶಿಷ್ಟ: ತುಳುನಾಡಿನಲ್ಲಿ ಗಣೇಶ ಚೌತಿಯನ್ನು ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತದೆ. ಈ ಆಚರಣೆಯಲ್ಲಿ ಗಣೇಶನ ಮೂರ್ತಿಯ ಪೂಜೆ ಇಲ್ಲ. ಇಲ್ಲಿ ಗಣೇಶ ‘ಬಾಮಕುಮಾರ’ನಾಗಿ ಪ್ರಕೃತಿಯ ರೂಪದಲ್ಲಿ ಅವತರಿಸುತ್ತಾನೆ. ಕಬ್ಬುಗಳನ್ನು ಇಟ್ಟು ಅದರಲ್ಲಿ ಗಣೇಶನನ್ನು ಆವಾಹಿಸುವುದು ತುಳುನಾಡಿನ ಕ್ರಮ.
ಕಬ್ಬನ್ನು ತುಂಡು ಮಾಡಿ ಚೌಕಾಕಾರದಲ್ಲಿ ಜೋಡಿಸಿ, ಅದಕ್ಕೆ ದೀಪವಿಟ್ಟು, ಬಾಳೆ ಎಲೆಯ ಮೇಲೆ ಗಣಪತಿ ಸ್ವಸ್ತಿಕ ಇರಿಸಿ, ಬೆಲ್ಲ, ಬಾಳೆಹಣ್ಣು, ಉದ್ದಿನ ದೋಸೆ (ತೆಳ್ಳವು) ಬಡಿಸಿ ಪೂಜಿಸುತ್ತಾರೆ. ಹೆಸರು, ಹುರುಳಿ ಮೊದಲಾದ ಕಾಳುಗಳ ಚಿಗುರುಗಳೇ ಗಣಪನಿಗೆ ಹೂವುಗಳು. ವಾರದ ಮೊದಲು ಹಬ್ಬದ ಸಿದ್ಧತೆಗಳು ಶುರುವಾಗುತ್ತವೆ. ತುಳಸಿಕಟ್ಟೆಯ ಬಳಿ ಮಣ್ಣು ಹದಗೊಳಿಸಿ, ಕಾಳುಗಳನ್ನು ಬಿತ್ತಿ, ಅವು ಮೊಳಕೆಯೊಡೆದು ಚಿಗುರುಗಳಾಗಬೇಕು. ನಳನಳಿಸುವ ಚಿಗುರುಗಳನ್ನು ಬಾಮಕುಮಾರನಿಗೆ ಅರ್ಪಣೆ ಮಾಡಲಾಗುತ್ತದೆ. ಮಣ್ಣಿನ ಸಂಬಂಧದೊಂದಿಗೆ ಪ್ರಕೃತಿ ಸಹಜವಾಗಿ ದೊರೆಯುವ ವಸ್ತುಗಳನ್ನು ಬಳಸಿ ಆಚರಿಸುವ ಹಬ್ಬ ಕೃಷಿ ಸಂಸ್ಕೃತಿಯನ್ನು ಪ್ರತಿಫಲಿಸುತ್ತದೆ.
ಇದನ್ನೂ ಓದಿ : ಉರ್ದು ಶಾಲೆಯಲ್ಲಿ ಗಣೇಶ ಪೂಜೆ.. ಭಾವೈಕ್ಯತೆ ಸಾರಿದ ಮುಸ್ಲಿಂ ವಿದ್ಯಾರ್ಥಿಗಳು