ಮಂಗಳೂರು: ಹೆತ್ತವರು ನೀಡುವ ಪಾಕೆಟ್ ಮನಿಯನ್ನು ತಮ್ಮಿಷ್ಟದ ತಿಂಡಿ ತಿನ್ನಲೋ, ಆಟಿಕೆ ಖರೀದಿಸಲು ಮಕ್ಕಳು ಇಷ್ಟಪಡುತ್ತಾರೆ. ಆದರೆ, ಪರಿಸರ ಕಾಳಜಿ ಹೊಂದಿದ ಮಂಗಳೂರಿನ ಸುಮಾರು 25 ವಿದ್ಯಾರ್ಥಿಗಳ ತಂಡ ತಮಗೆ ಸಿಕ್ಕ ಪಾಕೆಟ್ ಮನಿಯಲ್ಲಿ ಗಿಡ ಖರೀದಿಸಿ, ನೆಡುವ ಮೂಲಕ ಪರಿಸರದ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ.
ನಗರದ ಜೆಪ್ಪಿನಮೊಗರುವಿನ ಸುಮಾರು 25 ವಿದ್ಯಾರ್ಥಿಗಳ ತಂಡ ಪಾಕೆಟ್ ಮನಿ ಉಳಿಸಿ ಗಿಡ ನೆಡುವ ಕಾರ್ಯದಲ್ಲಿ ತೊಡಗಿದೆ. ಗ್ರೀನ್ ವಾರಿಯರ್ಸ್ ಎಂಬ ಈ ಮಕ್ಕಳ ಸೇನೆ ಮನೆ ಮನೆಗೆ ತೆರಳಿ ಪರಿಸರ ಪಾಠ ಮಾಡಿ ಗಿಡ ನೆಡುವ ಕಾರ್ಯ ಮಾಡುತ್ತಿದೆ.
ಈ ಕಾರ್ಯಕ್ಕೆ ಮೊದಲು ಮುಂದಾಗಿದ್ದು ಮುಡಿಪುವಿನ ಜವಾಹರ್ ನವೋದಯ ವಿದ್ಯಾಲಯದ ಏಳನೆ ತರಗತಿ ವಿದ್ಯಾರ್ಥಿನಿ ಹೆಚ್.ಆರ್. ಹನಿ. ಆಟವಾಡುತ್ತಿದ್ದ ವೇಳೆ ವಿಪರೀತ ಬಿಸಿಲಿನ ಬಗ್ಗೆ ಸಹಜವಾಗಿ ಮಕ್ಕಳು ಕೇಳುವಂತೆ ಹನಿ ತನ್ನ ತಾಯಿಯಲ್ಲಿ ಪ್ರಶ್ನಿಸಿದ್ದರು. ಆಗ ತಾಯಿ, ಮರಗಿಡಗಳನ್ನು ಕಡಿದ ಪರಿಣಾಮ ಈ ರೀತಿಯ ಸ್ಥಿತಿ ನಿರ್ಮಾಣವಾಗಿದೆ ಅಂದರಂತೆ. ಇದು ಹನಿಯ ಪರಿಸರ ಕಾಳಜಿ ಕಾರ್ಯಕ್ಕೆ ಕಾರಣವಾಯಿತು. ತಾಯಿಯ ಸಲಹೆಯಂತೆ ತನ್ನ ಗೆಳಯ, ಗೆಳತಿಯರಲ್ಲಿ ಪರಿಸರ ಉಳಿಸುವ ಕಾರ್ಯಕ್ಕೆ ಕೈ ಜೋಡಿಸುವಂತೆ ಮನವೊಲಿಸಿದಳು. ಆರಂಭದಲ್ಲಿ ಐದು ಮಂದಿಯಿದ್ದ ಈ ತಂಡದಲ್ಲಿ ಇದೀಗ 25 ವಿದ್ಯಾರ್ಥಿಗಳಿದ್ದಾರೆ.
ಹೂವಿನ ಗಿಡದ ಬದಲಿಗೆ ದೊಡ್ಡ ಮರ ಆಗುವ ಗಿಡಗಳನ್ನು ನೆಡಲು ಹನಿ ನೇತೃತ್ವದ ತಂಡ ನಿರ್ಧರಿಸಿ ಮನೆ ಮನೆಗೆ ತೆರಳಿ ಗಿಡ ನೆಡುವ ಕಾರ್ಯ ಮಾಡುತ್ತಿದೆ. ಈ ತಂಡ ಕಳೆದ ಮೂರು ವರ್ಷದಲ್ಲಿ 200ಕ್ಕೂ ಅಧಿಕ ಗಿಡಗಳನ್ನು ನೆಟ್ಟಿದೆ. ಹೆತ್ತವರು ನೀಡಿದ ಪಾಕೆಟ್ ಮನಿಯಿಂದ ಸೀತಾಫಲ, ಲಕ್ಷ್ಮಣ ಫಲ, ಬಾದಾಮಿ, ನಿಂಬೆ, ದಾಳಿಂಬೆ, ಬೇವು, ನುಗ್ಗೆ ಇಂತಹ ಹತ್ತಾರು ಗಿಡಗಳನ್ನು ಖರೀದಿ ಆಸಕ್ತರ ಮನೆಗೆ ಹೋಗಿ ನೆಟ್ಟು ಬಂದಿದೆ. ಇದರ ಜೊತೆಗೆ ಈ ತಂಡ ಸ್ವಚ್ಛತಾ ಕಾರ್ಯ ಮಾಡಿ ಜಾಗೃತಿ ಮೂಡಿಸುತ್ತಿದೆ.