ಮಂಗಳೂರು : ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಹೆಣ್ಣುಮಗುವಿಗೆ ಜನ್ಮ ನೀಡಿದ ತಾಯಿಗೆ ಆಸ್ಪತ್ರೆ ಸಿಬ್ಬಂದಿ ಗಂಡು ಮಗು ನೀಡಿ ಎಡವಟ್ಟು ಮಾಡಿಕೊಂಡ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರದ ಮುಸ್ತಫಾ ಅವರ ಪತ್ನಿ ಅಮ್ಬ್ರಿನಾ ಎಂಬುವರು ಹದಿನೆಂಟು ದಿನಗಳ ಹಿಂದೆ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು.
ಹೆರಿಗೆಯಾದ ಬಳಿಕ ಮಗುವನ್ನು ತೋರಿಸದೆ ಹೆಣ್ಣು ಮಗು ಹೆರಿಗೆಯಾಗಿದೆ ಎಂದು ತಿಳಿಸಿದರಂತೆ. ಆಸ್ಪತ್ರೆಯಲ್ಲಿ ಐಸಿಯುವಿನಲ್ಲಿದ್ದ ಮಗುವನ್ನು ಎರಡು ಬಾರಿ ತಾಯಿಗೆ ನೋಡುವ ಅವಕಾಶ ಸಿಕ್ಕಿದೆ. ಆ ಸಂದರ್ಭದಲ್ಲಿ ಮಗು ಹೆಣ್ಣು ಎಂಬುದನ್ನು ಖಾತ್ರಿ ಪಡಿಸಿದ್ದಾರೆ.
ಆದರೆ, ಮಗುವಿಗೆ ಆರೋಗ್ಯ ಸಮಸ್ಯೆ ಕಾಡುತ್ತಿದ್ದರಿಂದ ಪೋಷಕರು ಮಗುವನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವುದಾಗಿ ತಿಳಿಸಿದ್ದಾರೆ. ಅದರಂತೆ ಆಸ್ಪತ್ರೆ ಸಿಬ್ಬಂದಿ ಮಗುವನ್ನು ಸುತ್ತಿ ಎಲ್ಲಿಯೂ ಗಾಳಿ ತಾಗದಂತೆ ನೋಡಿ ಆಸ್ಪತ್ರೆಗೆ ಕೊಂಡೊಯ್ಯಬೇಕು ಎಂಬ ಷರತ್ತನ್ನು ವಿಧಿಸಿ ಆ್ಯಂಬುಲೆನ್ಸ್‌ನಲ್ಲಿ ಕಳುಹಿಸಿಕೊಟ್ಟಿದ್ದರು.
ಆದರೆ, ಉಡುಪಿ ಜಿಲ್ಲೆಯ ಬ್ರಹ್ಮಾವರ ಆಸ್ಪತ್ರೆಗೆ ಕೊಂಡೊಯ್ದು ಅಲ್ಲಿ ಪರಿಶೀಲಿಸಿದಾಗ ಇವರ ಕೈಗೆ ಗಂಡು ಮಗು ನೀಡಲಾಗಿತ್ತು. ಲೇಡಿಗೋಷನ್ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಹೆರಿಗೆಯಾದದ್ದು ಗಂಡು ಮಗುವಿಗೆ. ದಾಖಲೆಯಲ್ಲಿ ಬರೆದಾಗ ಹೆಣ್ಣು ಮಗು ಎಂದು ತಪ್ಪಾಗಿ ಬರೆಯಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಈ ಗಂಡು ಮಗು ನಮ್ಮದಲ್ಲ. ನಮ್ಮ ಹೆಣ್ಣು ಮಗು ನಮಗೆ ನೀಡಿ ಎಂದು ಪೋಷಕರು ಆಗ್ರಹಿಸಿದ್ದಾರೆ. ಮಂಗಳೂರಿನ ಬಂದರ್ ಠಾಣೆಯಲ್ಲಿ ಆಸ್ಪತ್ರೆ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಕುರಿತಂತೆ ಪರಿಶೀಲನೆ ನಡೆಸುತ್ತಿದ್ದಾರೆ. ಮಗು ಅದಲು ಬದಲಾದ ಬಗ್ಗೆ ಕಂಡು ಬಂದರೆ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಓದಿ: ನೇತ್ರದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ರಂಗಕರ್ಮಿ ಜಿ.ಕೆ.ಗೋವಿಂದರಾವ್